ಭೋಪಾಲ್, (ಸೆ.17); ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು ಬೆದರಿಕೆ ಹಾಕಿದ ಬಿಜೆಪಿ ನಾಯಕನ ಎದುರೇ ಎಎಸ್‌ಐ ಅಧಿಕಾರಿಯೊಬ್ಬರು ತಾವು ಧರಿಸಿದ್ದ ಸಮವಸ್ತ್ರವನ್ನೇ ಹರಿದು ಹಾಕಿರುವ ಘಟನೆ ಸಿಂಗೌಲಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಈ ವಿಡಿಯೋವೊಂದು ವೈರಲ್ ಆಗುವ ಮೂಲಕ, ಭಾರೀ ಸಂಚಲನ ಮೂಡಿಸಿದೆ.
ಈ ಘಟನೆ ಫೆಬ್ರವರಿ 2 ರಂದು ನಡೆದಿದ್ದು, ಇತ್ತೀಚೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ವರದಿಗಳ ಪ್ರಕಾರ ಏಳು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಿದ್ದರು.
ಚರ್ಚೆಯ ಸಮಯದಲ್ಲಿ ಬಿಜೆಪಿ ನಾಯಕ ಮತ್ತು ಕೌನ್ಸಿಲರ್‌ನ ಪತಿ ಅರ್ಜುನ್ ಗುಪ್ತಾ ಅವರು ಎಎಸ್‌ಐ ವಿನೋದ್ ಮಿಶ್ರಾ ಅವರನ್ನು ನಿನ್ನ ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿದ್ದಾರೆ. ಇದರಿಂದ ಕೆರಳಿದ ಪೊಲೀಸ್ ಅಧಿಕಾರಿ ಮಿಶ್ರಾ ಅಲ್ಲಿದ್ದವರ ಮುಂದೆಯೇ ತಮ್ಮ ಸಮವಸ್ತ್ರವನ್ನು ಬಿಚ್ಚಿ ಎಸೆದಿದ್ದಾರೆ.
ಈ ಹೈಡ್ರಾಮ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತಾ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿದ್ದರು. ಆದರೆ ಘಟನೆಯ ವಿಡಿಯೋ ಇತ್ತೀಚೆಗೆ ಸೋರಿಕೆಯಾಗಿ ಬಿಜೆಪಿ ನಾಯಕನ ಬೆದರಿಕೆ ಕುರಿತು ಚರ್ಚೆಗೆ ಕಾರಣವಾಗಿದೆ.
ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಗುಪ್ತಾ, ಸಿಸಿಟಿವಿ ದೃಶ್ಯಾವಳಿಗಳು ಹೇಗೆ ಸೋರಿಕೆಯಾದವು ಮತ್ತು ನಂತರ ಸಾಮಾಜಿಕ ಮಾಧ್ಯಮದಲ್ಲಿ ಹೇಗೆ ಹಂಚಿಕೊಂಡರು ಎಂಬುದರ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….