ಯಲಹಂಕ, (ಸೆ.14): ಆನ್‌ಲೈನ್ ರಮ್ಮಿ ಆಟದ ಚಟಕ್ಕೆ ಹಣ ಹೊಂದಿಸಲು ಅಣ್ಣನ ಮದುವೆಗಾಗಿ ಮನೆಯಲ್ಲಿ ತಂದಿಟ್ಟಿದ್ದ ಚಿನ್ನಾಭರಣ, ನಗದು ಕದ್ದ ಯುವಕನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆದಿತ್ಯ ರೆಡ್ಡಿ (22) ಬಂಧಿತ ಆರೋಪಿ. ಈತನಿಂದ ಒಟ್ಟು 7 ಲಕ್ಷ ರು. ಮೌಲ್ಯದ 107 ಗ್ರಾಂ ಚಿನ್ನಾಭರಣ, 100 ಗ್ರಾಂ ತೂಕದ ದೇವಿಯ ಬೆಳ್ಳಿಯ ಮುಖವಾಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕ್ಯಾಬ್ ಚಾಲಕನಾಗಿದ್ದ ಆರೋಪಿ ಆನ್‌ಲೈನ್ ರಮ್ಮಿ ಆಟದ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದ. ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಮನೆಯಲ್ಲಿಯೇ ಕಳ್ಳತನ ಮಾಡಲು ಸಂಚು ರೂಪಿಸಿದ್ದ.
ಆರೋಪಿಯ ಸಹೋದರನ ಮದುವೆ ನಿಶ್ಚಯವಾಗಿದ್ದರಿಂದ ಪೋಷಕರು ಮನೆಯಲ್ಲಿ ಚಿನ್ನಾಭರಣ, ನಗದು ಒಗ್ಗೂಡಿಸಿಟ್ಟಿದ್ದರು. ಆಗಸ್ಟ್ 28ರಂದು ಆರೋಪಿಯ ಪೋಷಕರು ಲಗ್ನಪತ್ರಿಕೆಗಳನ್ನು ಹಂಚಲು ಕೋಲಾರಕ್ಕೆ ತೆರಳಿದ್ದರು. ಸಹೋದರ ಸಹ ಮನೆಯಿಂದ ಹೊರಗಡೆ ಹೋದಾಗ ಮನೆಯ ಲಾಕರ್ ಒಡೆದಿದ್ದ ಆರೋಪಿ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದ.
ಮನೆಗೆ ಬಂದ ಬಳಿಕ ಕಳ್ಳತನವಾಗಿರುವುದನ್ನು ಗಮನಿಸಿದ್ದ ಮನೆಯವರು ಕಿರಿ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಅಷ್ಟರಲ್ಲಾಗಲೇ ಕದ್ದ ಚಿನ್ನಾಭರಣವನ್ನು ಆಂಧ್ರ ಪ್ರದೇಶದಲ್ಲಿ ಮಾರಾಟ ಮಾಡಲು ಹೊರಟಿದ್ದ ಆರೋಪಿಯನ್ನು ಯಲಹಂಕ ರೈಲ್ವೇ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….