ಗದಗ, (ಸೆ.09): ಮೌನ ಅನುಷ್ಠಾನದಿಂದ ಆತ್ಮ ಶುದ್ಧಿಗೊಳ್ಳುತ್ತದೆ. ಮೌನದಿಂದ ಮಹಾನ್ ಶಕ್ತಿ ಸೃಷ್ಟಿಯಾಗುತ್ತದೆ, ಮೌನಕ್ಕೆ ಇರುವ ಶಕ್ತಿ ಅಪಾರವಾಗಿದ್ದು, ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಕಾರಿಗಳಾದ ಮಹಾನ್ ತಪಸ್ವಿ ಡಾ. ಕುಮಾರ ಮಹಾರಾಜರು ಕಳೆದ 12 ದಿನಗಳಿಂದ ಕೈಗೊಂಡ ನಿರಾಹಾರ ಹಾಗೂ ಗವಿಯೊಳಗೆ ಗಾಳಿ ಬೆಳಕು ಇಲ್ಲದೆ ಇರುವಲ್ಲಿ ಕೈಗೊಂಡ ಮೌನಾನುಷ್ಠಾನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೌನಾನುಷ್ಠಾನ ಎಂಬುದು ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುವುದಾಗಿದೆ. ಇಂತಹದ್ದೊಂದು ಸಿದ್ಧಿಯಿಂದ ದೇವರನ್ನು ಹತ್ತಿರಕ್ಕೆ ಬರಮಾಡಿಕೊಳ್ಳುವ ಬಹುದೊಡ್ಡ ಸಂಕಲ್ಪದಲ್ಲಿ ಆದರಹಳ್ಳಿ ಶ್ರೀ ಗವಿಸಿದ್ದೇಶ್ವರಮಠದ ಡಾ.ಕುಮಾರ ಮಹಾರಾಜರು ಯಶಸ್ವಿಯಾಗಿದ್ದಾರೆ, ಜ್ಞಾನವು ದೇವರನ್ನು ಸ್ತುತಿಸುವುದಕ್ಕೋಷ್ಕರ ಬಳಸುವ ಏಕೈಕ ಮಾರ್ಗವಾಗಿದೆ. ಜಗತ್ತಿಗೆ ಬೆಳಕು ನೀಡುವಂತಹ ಶ್ವೇತವರ್ಣಧಾರಿಗಳಾಗಿರುವ ಕುಮಾರ ಮಹಾರಾಜರ ಅನುಷ್ಠಾನ ಕಷ್ಟದ ಅನುಷ್ಠಾನವಾಗಿದೆ. ಇದನ್ನು ಸಾಧಿಸಲು ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಾದ ಮತ್ತು ಅವರಲ್ಲಿರುವ ಅಂತಃಶಕ್ತಿ ಕಾರಣವಾಗಿದೆ. ಕುಮಾರ ಮಹಾರಾಜರ ಸಂಕಲ್ಪ ಮತ್ತು ಅನುಷ್ಠಾನ ಶುದ್ಧಿಯಿಂದ ಕೂಡಿದೆ ಎಂದು ಹೇಳಿದರು.
ಇದೊಂದು ಧಾರ್ಮಿಕ ಕೇಂದ್ರವಾಗಿ ಮುಂದಿನ ದಿನಗಳಲ್ಲಿ ಹೆಸರು ಮಾಡಲಿದೆ, ಆದರಳ್ಳಿ ಗವಿಸಿದ್ದೇಶ್ವರಮಠದ ಅಭಿವೃದ್ದಿಯ ವಿಷಯದಲ್ಲಿ ಶ್ರೀಗಳು ಕೈಗೊಳ್ಳುವ ಎಲ್ಲ ಕಾರ್ಯಗಳಿಗೂ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೇಳಿದರು.
ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಇವರು ದಿವ್ಯ ಸಾನಿಧ್ಯ ವಹಿಸಿದ್ದರು. ಅಗಡಿ ಕಲ್ಮಠದ ಶ್ರೀ ಗುರುಶಿದ್ದ ಮಹಾಸ್ವಾಮಿಗಳು, ಕುಂದಗೋಳದ ಅಭಿನವ ಬಸವಣ್ಣಜ್ಜನವರು, ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಮುಡಿಯ ಶ್ರೀ ಸದಾಶಿವ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ವೆಂಕಟೇಶ ರಾಠೋಡ ಮಾತನಾಡಿದರು.
ಕ್ಯಾಪ್ಷನ್- ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ ಆದರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಮಹಾನ್ ತಪಸ್ವಿ ಡಾ.ಕುಮಾರ ಮಹಾರಾಜರ ಮೌನಾನುಷ್ಠಾನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಕುಮಾರ ಮಹಾರಾಜರು, ಶಾಸಕ ಡಾ.ಚಂದ್ರು ಲಮಾಣಿ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….