ರಾಮನಗರ, (ಸೆ.08); ಕೇಂದ್ರ ಸಚಿವ ಅಮಿತ್ ಶಾ ಅವರು ಕಾಶ್ಮೀರದಲ್ಲಿ ನಮ್ಮ ಯೋಜನೆಯನ್ನೇ ಘೋಷಿಸಿದ್ದು, ನಮ್ಮ ಸರ್ಕಾರದ ಅಭಿವೃದ್ಧಿ ಎಲ್ಲರಿಗೂ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಕನಕಪುರದ ಹಾರೋಬೆಲೆಯಲ್ಲಿ ಆರ್ಕಾವತಿ ಜಲಾಶಯ ಬಲದಂಡೆ ಏತನೀರಾವರಿ ಯೋಜನೆಯ ಪುನಶ್ವೇತನ ಕಾಮಗಾರಿಯ ಪರೀಕ್ಷಾರ್ಥ ಚಾಲನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕರ್ನಾಟಕ ಸರ್ಕಾರದ ಮಾದರಿಯನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕುಟುಕಿದರು.
ನಮ್ಮ ಸರ್ಕಾರದಲ್ಲಿ ಈಗ ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಅದನ್ನೇ ನೋಡಿಕೊಂಡು ಅಮಿತ್ ಶಾ ಅವರು ಕಾಶ್ಮೀರದಲ್ಲಿ ಮಹಿಳೆಯರಿಗೆ 1.5 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ನಾವು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆಂದು ಹೇಳಿದಾಗ ಬಿಟ್ಟಿ ಯೋಜನೆ, ರಾಜ್ಯ ದಿವಾಳಿ ಆಗುತ್ತದೆಂದು ಬಿಜೆಪಿಯವರು ಬೊಬ್ಬಿರಿದಿದ್ದರು. ಈಗ ನೋಡಿದರೆ ಕಾಶ್ಮೀರದಲ್ಲಿ ಅಮಿತ್ ಶಾ ಅವರೇ 1500 ರೂಪಾಯಿ ಕೊಡುವುದಾಗಿ ಬೋರ್ಡ್ ಹಿಡಿಯುತ್ತಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ನಮ್ಮ ಅಭಿವೃದ್ಧಿ ಎಲ್ಲರಿಗೂ ಮಾದರಿ ಎಂದು ಬಿಜೆಪಿಗೆ ಕುಟುಕಿದರು.
ಇದೇ ವೇಳೆ ಎತ್ತಿನಹೊಳೆ ಯೋಜನೆ ಯಶಸ್ವಿ ಅನುಷ್ಠಾನ ವಿಚಾರವಾಗಿ ಮಾತನಾಡಿದ ಅವರು, ಇದು ಸಾಧ್ಯವೇ ಎಂದು ನಮ್ಮ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಅವರಿಗೆಲ್ಲಾ ಉತ್ತರವೆಂಬಂತೆ ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ.
ಇನ್ನು ಅಲಮಟ್ಟಿ ಅಣೆಕಟ್ಟಿನ ಕ್ರಸ್ಟ್ ಗೇಟ್ ಮುರಿದು ಹೋದಾಗ ನನ್ನ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಒಂದೇ ವಾರದಲ್ಲಿ ಅದನ್ನು ಸರಿ ಮಾಡಿಸಿದ್ದೇವೆ. ಇನ್ನು ಮೇಕೆದಾಟು ಸಹ ಆಗಬೇಕಿದೆ. ಈ ವಿಚಾರವಾಗಿ ನಾವು ಗಮನಹರಿಸುತ್ತೇವೆ ಎಂದು ಭರವಸೆ ನೀಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….