ಬಳ್ಳಾರಿ, (ಸೆ.05): ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2022-23 ನೇ ಸಾಲಿನ 12 ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಸೆ.06 ರಂದು ಮಧ್ಯಾಹ್ನ 12.30 ಗಂಟೆಗೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿದೆ.
ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.
ಗುರುವಾರದಂದು ವಿಶ್ವವಿದ್ಯಾಲಯದ ಪರೀಕ್ಷಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಘಟಿಕೋತ್ಸವದಲ್ಲಿ ರಾಜ್ಯದ ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಘಟಿಕೋತ್ಸವದ ಭಾಷಣವನ್ನು ಹಿರಿಯ ವಿಜ್ಞಾನಿ ಹಾಗೂ ಧಾರವಾಡ ಐಐಟಿಯ ಡೀನ್ ಮತ್ತು ಗೌರವ ಪ್ರಾಧ್ಯಾಪಕರಾದ ಪ್ರೊ.ಎಸ್.ಎಮ್.ಶಿವಪ್ರಸಾದ್ ಅವರು ಮಾಡಲಿದ್ದಾರೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರು ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ವಾರ್ಷಿಕ ಘಟಿಕೋತ್ಸವದ ನೇತೃತ್ವವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಮುನಿರಾಜು ಅವರು ವಹಿಸಲಿದ್ದಾರೆ.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರುಗಳು, ಕುಲಸಚಿವರಾದ ಎಸ್.ಎನ್.ರುದ್ರೇಶ್, ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ ಅವರುಗಳು ಕುಲಪತಿಗಳಿಗೆ ಸಾಥ್ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
3 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಉಮಾಶ್ರೀ, ಎಸ್.ಕೆ.ಮೋದಿ, ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ ಮೂರು ಮಹನೀಯರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.
ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 36 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.
ಎಲ್ಲ ವಿಭಾಗಗಳ ಸ್ನಾತಕ ಪದವಿಯ 56 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 69 ಒಟ್ಟು 125 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ.
03 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಪಟ್ಟಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಉಮಾ.ಪಿ., ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ನಾಗರಾಜ.ಕೆ.ಬಿ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ದೌಲತ್ ಬಾನು ಇವರುಗಳು ಪಡೆದುಕೊಂಡಿದ್ದಾರೆ.
02 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಪಟ್ಟಿ: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ವಿಭಾಗದ ಎ.ಕೆ.ಹುಲಿಗೆಮ್ಮ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಿಯಾಂಕ.ಎ., ಭೌತಶಾಸ್ತ್ರ ವಿಭಾಗದ ಪೂಜಾ ಹಿರೇಹಾಳ್, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತçದ ಸಾಲುಂಕೆ ಮಿತ್ರಾ ಹಾಗೂ ವೀರಶೈವ ಮಹಾವಿದ್ಯಾಲಯದ ಬಿಎಸ್‌ಸಿ ವಿಭಾಗದ ಶ್ರೇಯಾ.ಬಿ.ಪಿ ಇವರುಗಳು ಪಡೆದುಕೊಂಡಿದ್ದಾರೆ.
ಪರೀಕ್ಷಾ ಫಲಿತಾಂಶ: ವಿಶ್ವವಿದ್ಯಾಲಯದ ಸ್ನಾತಕ ಪದವಿಯಲ್ಲಿ ಒಟ್ಟು 13,339 ಸ್ನಾತಕ ಪದವಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆದು ತಮ್ಮ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1,733 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.
ಗೌರವ ಡಾಕ್ಟರೆಟ್ ಪಡೆದ ಮೂರು ಜನರ ಪರಿಚಯ ಇಂತಿದೆ:
ಉಮಾಶ್ರೀ (ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ), ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ 1957 ಮೇ 10 ರಂದು ಜನಿಸಿದ ಇವರು, 100ಕ್ಕೂ ಹೆಚ್ಚು ನಾಟಕ, 6,500 ಪ್ರದರ್ಶನ ಮತ್ತು 460 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ಪ್ರಸ್ತುತ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ ಮತ್ತು 2013 ರಿಂದ 2018 ರವರೆಗೆ ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಶ್ರೀ.ಕೆ.ವಿ.ಶಂಕರೇಗೌಡ ಪ್ರಶಸ್ತಿ, ನಾಟ್ಯ ಸಮನ್ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, 10 ನೇ ಒಷಿಯನ್ಸ್ ಸಿನೆಫ್ಯಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಗುಲಾಬಿ ಟಾಕೀಸ್” ಚಲನಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದು, ಪ್ರತಿಷ್ಠಿತ ರಜತ್ ಕಮಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿವಂಗತ ಡಿ.ದೇವರಾಜ ಅರಸು ರಾಷ್ಟ್ರೀಯ ಶ್ರೀರತ್ನ ಪ್ರಶಸ್ತಿ, ಪಂಚರತ್ನ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣದೇವರಾಯ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಎಸ್.ಕೆ.ಮೋದಿ (ಕೈಗಾರಿಕೆ ಮತ್ತು ಸಮಾಜ ಸೇವೆ): ಇವರು 1951 ಜ.15 ರಂದು ಜನಿಸಿದರು, ಬಳ್ಳಾರಿಯ ವಿಭೂತಿಗುಡ್ಡ ಮೈನ್ಸ್ ಪ್ರೈಮ್‌ಲಿ ನಿರ್ದೇಶಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಇವರು ಸಮುದಾಯ ಭವನ ಮತ್ತು ಪರಿಶಿಷ್ಟ ಜಾತಿ ಮಹಿಳೆಯರಿಗೆ ಶೌಚಾಲಯಗಳ ನಿರ್ಮಾಣ, ಧಾರ್ಮಿಕ ಸ್ಥಳಗಳ ನವೀಕರಣ, ಉಚಿತ ಶಿಕ್ಷಣ ಒದಗಿಸುವುದರ ಜೊತೆಗೆ, ಶಾಲೆಗಳಿಗೆ ಅಗತ್ಯ ಸಾಮಗ್ರಿಗಳ ದಾನ, ನೇತ್ರ ಶಿಬಿರಗಳ ಆಯೋಜನೆ, ಉಚಿತ ವೈದ್ಯಕೀಯ ನೆರವು, ವಿಮ್ಸ್ ವೈದ್ಯಕೀಯ ಕಾಲೇಜಿಗೆ ಸ್ಕ್ಯಾನಿಂಗ್ ಯಂತ್ರಗಳ ದಾನ, ಪಂಪ್‌ಗಳನ್ನು ಸ್ಥಾಪಿಸಿದ್ದಾರೆ.
ನೀರಿನ ಟ್ಯಾಂಕ್‌ಗಳ ನಿರ್ಮಾಣ, ಪೊಲೀಸ್ ಇಲಾಖೆ ಮತ್ತು ನಗರ ನಿಗಮಕ್ಕೆ ವಾಹನಗಳನ್ನು ಒದಗಿಸಿದ್ದಾರೆ. ಅಕ್ಷಯ ಪಾತ್ರಾ ಫೌಂಡೇಶನ್‌ಗೆ ಅಡುಗೆ ಮನೆ ನಿರ್ಮಿಸಿ, ಮಧ್ಯಾಹ್ನದ ಊಟ ವಿತರಣೆಗೆ ವಾಹನಗಳನ್ನು ಒದಗಿಸಿದ್ದಾರೆ. ಇವರ ಮಾಲೀಕತ್ವದ ಮಾರುತಿ ಸುಜುಕಿ ಡೀಲರ್‌ಶಿಪ್‌ಗಾಗಿ ಹಲವಾರು ಪ್ಲಾಟಿನಂ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ (ಶಿಕ್ಷಣ ಸೇವೆ): ಇವರು ಮೂಲತಃ ಅಖಂಡ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಾಗತಿಬಸಾಪುರ ಗ್ರಾಮದವರು. 1937 ಸೆ.03 ರಂದು ಅವರಗೋಳದಲ್ಲಿ ಜನಿಸಿದರು. ತತ್ವಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಅನಕ್ಷರತೆ, ಬಡತನ ಮತ್ತು ನಿರುದ್ಯೋಗದಂತಹ ಗ್ರಾಮೀಣ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿ 1969 ರಲ್ಲಿ ತೆಗ್ಗಿನಮಠದ ಕಲೆ ಮತ್ತು ಶಿಕ್ಷಣ (ಟಿಎಂಎಇ) ಸೊಸೈಟಿಯನ್ನು ಸ್ಥಾಪಿಸಿದರು.
ಪಾಲಿಟೆಕ್ನಿಕ್ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿ ಯುವಕರಿಗೆ ತರಬೇತಿ ನೀಡುವುದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉನ್ನತೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಉಚಿತ ಹಾಸ್ಟೆಲ್‌ಗಳನ್ನು ಸ್ಥಾಪಿಸಿದ್ದಾರೆ.
ಇವರಿಗೆ ಶಿವಾಚಾರ್ಯ ರತ್ನ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಚಿನ್ನದ ಪದಕ ಲಭಿಸಿವೆ.
ಘಟಿಕೋತ್ಸವದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರುಗಳು, ಸಂಯೋಜಕರುಗಳು, ವಿವಿಧ ಮಹಾವಿದ್ಯಾಲಯಗಳ ಪಾಂಶುಪಾಲರಾಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಸಚಿವರಾದ ಎಸ್.ಎನ್.ರುದ್ರೇಶ್, ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….