ಒಂದು ಊರಿನಲ್ಲಿ ಒಬ್ಬ ಮುದುಕಿಯಿದ್ದಳು. ಅವಳು ಗುಡಿಸಲಿನಲ್ಲಿ ‘ವಾಸವಾಗಿ ಕೂಲಿ ಕೆಲಸ ಮಾಡುತ್ತಾ ತನ್ನ ಜೀವನ ಸಾಗಿಸುತ್ತಿದ್ದಳು. ಅದೇ ಊರಿನಲ್ಲಿ ಒಂದು ಶ್ರೀಮಂತ ಮನೆತನವಿತ್ತು. ಆ ಮನೆಯ ಒಡತಿ ಗೌರಮ್ಮ ದೀನ ದಲಿತರ ಬಗ್ಗೆ ಅನುಕಂಪವುಳ್ಳವಳಾಗಿದ್ದಳು. ತನ್ನ ಮನೆಗೆ ಬಂದ ಅತಿಥಿಗಳಿಗೆ ಉಣಿಸಿ ಅವರ ಮನ ತಣಿಸುತ್ತಿದ್ದಳು ಹಾಗೂ ಬಡವರಿಗೆ ದಾನ ಮಾಡುತ್ತಿದ್ದಳು.
ಒಮ್ಮೆ ಆ ಊರಿಗೆ ಒಬ್ಬ ಕೀರ್ತನಕಾರ ಬಂದನು. ಅವನು ಅಲ್ಲಿಯ ಶ್ರೀ ಮಾರುತಿಯ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆಯ ವೇಳೆಗೆ ರಾಮಾಯಣ ಹೇಳುತ್ತಿದ್ದನು. ಆ ಶಾಸ್ತ್ರಿ ಯು ಹೇಳುವ ರಾಮಾಯಣವನ್ನು ಕೇಳಲು ಜನ ಕಿಕ್ಕಿರಿದು ತುಂಬಿರುತ್ತಿದ್ದರು.
ಆ ಜನರ ಗುಂಪಿನಲ್ಲಿ ಬಡ ಮುದುಕಿಯೂ ಇರುತ್ತಿದ್ದಳು. ಆದರೆ ಶ್ರೀಮಂತ ಮನೆಯ ಗೌರಮ್ಮನಿಗೆ ಅನೇಕ ಮನೆ ಕೆಲಸಗಳಿಂದ ರಾಮಾಯಣ ಕೇಳಲು ಆಗುತ್ತಿರಲಿಲ್ಲ. ಅದಕ್ಕಾಗಿ ಗೌರಮ್ಮನು ತನ್ನ ಮನದೊಳಗೆ ಚಿಂತಿಸುತ್ತಿದ್ದಳು.
ಒಂದು ದಿನ ಆ ಬಡ ಮುದುಕಿಯು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಬೇಗ ಉಂಡು ಹೋಗಬೇಕೆಂದು ಗೌರಮ್ಮನ ಮನೆಗೆ ಮಜ್ಜಿಗೆ ತರಲಿಕ್ಕೆಂದು ಬಂದಳು. ಈ ಮುದುಕಿಯು ಗೌರಮ್ಮನಿಗೆ ‘ನೀವು ಮಾರುತಿ ದೇವಸ್ಥಾನಕ್ಕೆ ರಾಮಾಯಣ ಕೇಳಲು ಬರುವುದಿಲ್ಲವಲ್ಲ! ಶಾಸ್ತ್ರಿಗಳು ಬಹಳ ಚೆನ್ನಾಗಿ ಹೇಳುತ್ತಾರೆ. ಈ ದಿನವಾದರೂ ಬನ್ನಿ’ ಎಂದಳು.
ಆಗ ಗೌರಮ್ಮನು, ‘ನನಗೆ ಮನೆಗೆಲಸದಿಂದಾಗಿ ಅಲ್ಲಿಗೆ ಹೋಗಲು ಆಗುವುದಿಲ್ಲ. ಏನು ಮಾಡುವುದು, ಮಕ್ಕಳು ಮರಿಗಳಿಗೆ ಅಡುಗೆ ಮಾಡಿ ಉಣಿಸುವುದರಲ್ಲಿಯೇ ವೇಳೆ ಕಳೆದು ಹೋಗುತ್ತದೆ. ನೀನು ಅಲ್ಲಿಗೆ ದಿನಾ ಕೇಳಲು ಹೋಗುವಿಯಲ್ಲ! ಅವರು ಏನು ಹೇಳಿದರೆಂಬುದನ್ನು ನೀನು ಕೇಳಿರುವಿ. ಅದನ್ನೇ ನನಗೆ ಈಗ ಹೇಳು’ ಎಂದಳು.
ಈ ಮಾತುಗಳನ್ನು ಕೇಳಿ ಮುದುಕಿಗೆ ದಿಕ್ಕೇ ತೋಚದಂತಾಯಿತು. ತಾನು ಬೇಗ ಮಜ್ಜಿಗೆ ಒಯ್ದು ಉಂಡು ಬೇರೆಯವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಬೇಕು. ರಾಮಾಯಣ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಏನು ಮಾಡುವುದು, ಹೇಗೆ ಹೇಳಬೇಕು ಎಂಬುದೇ ಅವಳಿಗೆ ತಿಳಿಯದಂತಾಯಿತು.
ಕೊನೆಗೆ ಅವಳು ತನ್ನ ಬುದ್ದಿಯನ್ನು ಉಪಯೋಗಿಸಿ, ‘ರಾಮ ಬಂದ, ರಾವಣನ ಕೊಂದ, ಸೀತೆಯನ್ನು ತಂದ, ತರಿ ಮಜ್ಜಿಗೆ’ ಎಂದಳು. ಈ ಮೂರು ಮಾತುಗಳನ್ನು ಕೇಳಿ ಗೌರಮ್ಮ ಸಂತೋಷದಿಂದ ರಾಮಾಯಣ ಇಷ್ಟೇ ಇರಬಹುದೆಂದು ತಿಳಿದು ಆ ಮುದುಕಿಗೆ ಮಜ್ಜಿಗೆಯನ್ನು ಕೊಟ್ಟಳು. ಮುದುಕಿಯು ಹಿಗ್ಗಿನಿಂದ ಮಜ್ಜಿಗೆಯನ್ನು ತೆಗೆದುಕೊಂಡು ತನ್ನ ಗುಡಿಸಲಿಗೆ ಹೋದಳು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….