ಮುಂಬೈ, (ಸೆ.01); ಎಂಟು ತಿಂಗಳ ಹಿಂದಷ್ಟೇ ಪ್ರಧಾನಿ ಮೋದಿ ಉದ್ಘಾಟಿಸಿದ ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಘಟನೆ ವಿರೋಧಿಸಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮುಖಂಡರು ಭಾನುವಾರ ದಕ್ಷಿಣ ಮುಂಬೈನ ಹುತಾತ್ಮ ಚೌಕ್‌ನಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ಹುತಾತ್ಮ ಚೌಕ್‌ಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದರು.
ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರತಿಭಟನಾ ಮೆರವಣಿಗೆ ಮುಕ್ತಾಯಗೊಂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಇತಿಹಾಸ ಪ್ರಸಿದ್ಧ ಯೋಧ ರಾಜನಿಗೆ ಮಾಡಿದ ಅವಮಾನವನ್ನು ಮಹಾರಾಷ್ಟ್ರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಕ್ಷಮಾಪಣೆಯಲ್ಲಿನ ದುರಹಂಕಾರವನ್ನು ನೀವು ಗಮನಿಸಿದ್ದೀರಾ? ಆ ವೇಳೆ ಒಬ್ಬ ಉಪಮುಖ್ಯಮಂತ್ರಿ ನಗುತ್ತಿದ್ದರು, ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
“ತಪ್ಪನ್ನು (ಕುಸಿತ) ಕ್ಷಮಿಸಲು ಸಾಧ್ಯವಿಲ್ಲ. ‘ಬಿಜೆಪಿ ಭಾರತದಿಂದ ತೊಲಗಿ’ ಎಂದು ಒತ್ತಾಯಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ” ಎಂದು ಅವರು ಹೇಳಿದರು.
ಈ ವೇಳೆ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು, ಏಕನಾಥ ಶಿಂದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಮೆ ಅನಾವರಣಗೊಳಿಸಿ ಎಂಟು ತಿಂಗಳಲ್ಲೇ ಕುಸಿದು ಬಿದ್ದಿದೆ. ಮಹಾರಾಷ್ಟ್ರ ಜನರ ಆಕ್ರೋಶಕ್ಕೆ ಧ್ವನಿ ನೀಡಲು ಈ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದೆವೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ರಾಜೇಶ್ ಟೋಪೆ ತಿಳಿಸಿದರು.
ಕಾಂಗ್ರೆಸ್ ಸಂಸದ ಶಾಹು ಛತ್ರಪತಿ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಮತ್ತು ಶಾಸಕ ಅನಿಲ್ ದೇಶಮುಖ್ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….