ಬೆಂಗಳೂರು, (ಸೆ.01); ಕರೋನಾ ಅವಧಿಯಲ್ಲಿ ಬರೋಬ್ಬರಿ 7,223 ಕೋಟಿ ರೂ. ಹೆಚ್ಚು ಮೊತ್ತದ ಖರೀದಿಗೆ ನಕಲಿ ಬಿಲ್ ಗಳನ್ನು ಒದಗಿಸಲಾಗಿದೆ ಎನ್ನುವ ಗಂಭೀರ ಆರೋಪ ಇದೀಗ ಕೇಳಿಬಂದಿದೆ.
ಬಿಜೆಪಿ ಅವಧಿಯಲ್ಲಿ ಕರೋನಾ ಅವಧಿ ಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿರುವ ಆರೋಪ ಮಾಡಿದ್ದ ಕಾಂಗ್ರೆಸ್ ನಾಯ ಕರಿಗೆ ಇದೀಗ, ಅಕ್ರಮ ನಡೆದಿರುವುದಕ್ಕೆ ‘ದಾಖಲೆ’ ಸಮೇತ ಮಾಹಿತಿ ಸಿಕ್ಕಿರುವುದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಬ್ರಹ್ಮಾಸ್ತ್ರ ಸಿಕ್ಕಿದೆ.
ಕರೋನಾ ಸಮಯದಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ನೇಮಿಸಿತ್ತು. ಇದೀಗ ಈ ಸಮಿತಿ ಯೂ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಅವ್ಯವಹಾರ ವಾಗಿರುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿದೆ.
ಇದರೊಂದಿಗೆ ಏಳು ಸಾವಿರ ಕೋಟಿ ರು. ಹೆಚ್ಚಿನ ಮೌಲ್ಯದ ವಿವಿಧ ಸಾಮಗ್ರಿಗಳ ಖರೀದಿಗೆ ಸೂಕ್ತ ದಾಖಲೆಗಳೇ ಇಲ್ಲವೆಂದು ವರದಿಯಾಗಿದೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಆಯೋಗದ ಅಧ್ಯಕ್ಷ ಕುನ್ಹಾ ಅವರು, ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದರು. ಇದರಲ್ಲಿ ಪ್ರಮುಖವಾಗಿ ಯಾವೆಲ್ಲ ರೀತಿಯಲ್ಲಿ ಅಕ್ರಮ ನಡೆದಿದೆ? ಹೆಚ್ಚುವರಿ ಮೊತ್ತಕ್ಕೆ ಔಷಧಿ, ವೆಂಟಿಲೇಟರ್, ಮಾಸ್ಕ್ ಸೇರಿದಂತೆ ಹಲವು ವಸ್ತುಗಳ ಖರೀದಿ ವೇಳೆ ಅಕ್ರಮ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿರುವ ಮಧ್ಯಂತರ ವರದಿಯಲ್ಲಿ, ಸುಮಾರು 7223 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಖರೀದಿಗೆ ಸೂಕ್ತ ದಾಖಲೆಗಳೇ ಇಲ್ಲದಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಂತರ ವರದಿಯಲ್ಲಿಯೇ ಈ ಪ್ರಮಾಣದ ಅವ್ಯವಹಾರ ನಡೆದಿದೆ ಎಂದಿರುವುದರಿಂದ ಅಂತಿಮ ವರದಿ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಆರೋಗ್ಯ ಇಲಾಖೆ ವತಿಯಿಂದ 1754 ಕೋಟಿ ರೂ., ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ 1406 ಕೋಟಿ ರೂ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 918 ಕೋಟಿ ರೂ, ಕರ್ನಾಟಕ ರಾಜ್ಯ ಔಷಧ ಸರಬರಾಜು ಸಂಸ್ಥೆಯಿಂದ 1394 ಕೋಟಿ ರೈ ಸೇರಿದಂತೆ ಬಿಬಿಎಂಪಿ ಝೋನ್ ವಾರು, ಕೆಲ ಸರಕಾರಿ ಆಸ್ಪತ್ರೆಗಳ ವತಿಯಿಂದ ಖರೀದಿಸಿರುವ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ.
ಈ ರೀತಿ ನಕಲಿ ಬಿಲ್ ಅಥವಾ ಇನ್ನಿತರೆ ಅಕ್ರಮದ ಮೂಲಕ ನಡೆದಿರುವ ಅಕ್ರಮದ ಪ್ರಮಾಣವೇ 7223 ಸಾವಿರ ಕೋಟಿ ರು. ದಾಟಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
ಕೋವಿಡ್ ಹಗರಣದ ವರದಿ ಸಿಎಂ ಕೈ ಸೇರಿದ ಬೆನ್ನಲ್ಲೇ ಕಾವೇರಿ ನಿವಾಸಕ್ಕೆ ಸಚಿವರು ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂ.ಬಿ ಪಾಟೀಲ, ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಎನ್ ರಾಜಣ್ಣ, ಎಂ.ಸಿ ಸುಧಾಕರ್ ದಿನೇಶ್ ಗೂಂಡುರಾವ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಆಗಮಿಸಿ ಕೋವಿಡ್ ಅವಧಿಯ ಅಕ್ರಮದ ಬಗ್ಗೆ ಸಿಎಂ ಜತೆ ಸಮಾಲೋಚನೆ ನಡೆಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….