ಬಹಳ ಹಿಂದೆ ಒಬ್ಬ ಮನುಷ್ಯನಿದ್ದ ಅವನು, ಚಿಕ್ಕವಯಸ್ಸಿನಲ್ಲಿಯೇ ಸಂಪಾದಿಸಿ ಶ್ರೀಮಂತನಾಗಿದ್ದ. ಅವನ ಹತ್ತಿರ ಎಲ್ಲವೂ ತುಂಬಿತ್ತು. ಆದರೂ ಆತನಿಗೆ ಮತ್ತೂ ಗಳಿಸಬೇಕು ಎನ್ನುವ ಆಸೆ ದಿನೇ ದಿನೇ ಹೆಚ್ಚುತ್ತಿತ್ತು. ಹೀಗಿರುವಾಗ ಆ ಪಟ್ಟಣಕ್ಕೆ ಅಪರೂಪದ ಬೌದ್ಧ ಭಿಕ್ಷು ಬಂದಿದ್ದಾರೆ ಎಂದು ತಿಳಿಯಿತು.
ಶ್ರೀಮಂತ ಯುವಕ ಅಲ್ಲಿಗೆ ಹೋಗಿ ಅವರನ್ನು ತನ್ನ ಮನೆಗೆ ಆಹ್ವಾನಿಸಿ ವಿಶೇಷವಾಗಿ ತಾನೇ ಮುಂದೆ ನಿಂತು ಅತಿಥಿ ಸತ್ಕಾರ ಮಾಡಿದನು. ಅವನ ಸತ್ಕಾರದಿಂದ ತೃಪ್ತಿಯಾದ ಬೌದ್ಧ ಬಿಕ್ಷು ಹೊರಡುವಾಗ, ಶ್ರೀಮಂತ ಮನುಷ್ಯನಿಗೆ ನಾಲ್ಕು ಅಪರೂಪದ ದೀಪಗಳನ್ನು ಕೊಟ್ಟು, ಮಗು ನಿನಗೆ ಇನ್ನೂ ಸಂಪತ್ತು ಬೇಕು ಎಂದು ಅನಿಸಿದರೆ ಇದರಲ್ಲಿರುವ ಒಂದು ದೀಪವನ್ನು ಹಚ್ಚಿ ಹಿಡಿದು ಪೂರ್ವ ದಿಕ್ಕಿನ ಕಡೆಗೆ ನಡೆಯುತ್ತಾ ಹೋಗು, ಎಲ್ಲಿ ಆ ದೀಪ ನಿಲ್ಲುತ್ತದೆಯೋ, ಆ ಜಾಗವನ್ನು ಅಗೆದರೆ ಅಲ್ಲಿ ನಿನಗೆ ಸಂಪತ್ತು ಸಿಗುತ್ತದೆ.
ಅದಾದ ಮೇಲೆ ಮತ್ತೆ ಸಂಪತ್ತು ಬೇಕೆನಿಸಿದರೆ, ಎರಡನೇ ದೀಪವನ್ನು ಹಚ್ಚು, ಈ ದೀಪವನ್ನು ತೆಗೆದುಕೊಂಡು ಪಶ್ಚಿಮ ದಿಕ್ಕಿನ ಕಡೆ ನಡೆ, ಎಲ್ಲಿ ದೀಪ ಆರುತ್ತದೋ, ಅಲ್ಲಿ ಆಗೆದರೆ ಸಂಪತ್ತು ಸಿಗುತ್ತದೆ ಅದನ್ನು ತೆಗೆದುಕೋ. ಇನ್ನೂ ಬೇಕು ಎಂದು ಅನಿಸಿದರೆ ಮೂರನೇ ದೀಪವನ್ನು ಹಚ್ಚು, ಉತ್ತರ ದಿಕ್ಕಿನ ಕಡೆಗೆ ದೀಪವನ್ನು ತೆಗೆದುಕೊಂಡು ಹೋಗು ಆ ದೀಪ ಎಲ್ಲಿ ನಿಲ್ಲುತ್ತದೋ ಅಲ್ಲಿ ಭೂಮಿಯನ್ನು ಆಗೆದಾಗ ಸಂಪತ್ತು ದೊರೆಯುತ್ತದೆ ಅವೆಲ್ಲವೂ ನಿನ್ನದೇ ಆಗುತ್ತದೆ.
ಮೂರು ದೀಪಗಳಾಯಿತು ಕಡೆಯದಾಗಿ ಇನ್ನೂ ಒಂದು ದೀಪ ನಿನ್ನ ಹತ್ತಿರ ಉಳಿಯುತ್ತದೆ. ಅದು ದಕ್ಷಿಣ ದಿಕ್ಕಿನ ಕಡೆ ಹೋಗುತ್ತದೆ. ಆದರೆ ಆ ದೀಪವನ್ನು ಎಂದಿಗೂ ಹಚ್ಚಬೇಡ ಮತ್ತು ದಕ್ಷಿಣ ದಿಕ್ಕಿನ ಕಡೆ ಹೋಗುವ ಯೋಚನೆಯನ್ನು ಮಾಡಬೇಡ ಎಂದು ಹೇಳಿ, ಬೌದ್ಧ ಬಿಕ್ಷು ಹೊರಟು ಹೋದನು.
ಬೌದ್ಧ ಬಿಕ್ಷು ಮನೆಯಿಂದ ಹೋಗುತ್ತಿದ್ದಂತೆ ಈ ಮನುಷ್ಯನಿಗೆ ದೀಪದ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಯಿತು. ಒಂದು ದೀಪವನ್ನು ಹಚ್ಚಿ ಪೂರ್ವ ದಿಕ್ಕಿನ ಕಡೆ ನಡೆಯತೊಡಗಿದನು ಹೋಗುತ್ತಾ ಹೋಗುತ್ತಾ ಒಂದು ಕಾಡಿನ ದಿಕ್ಕಿಗೆ ಹೋಗಿ ಅಲ್ಲೊಂದು ಜಾಗದಲ್ಲಿ ದೀಪ ನಂದಿ ಹೋಯಿತು. ಆ ಜಾಗವನ್ನು ಅಗೆದಾಗ, ಪಳಪಳ ಹೊಳೆವಂಥ ಚಿನ್ನ ,ಬೆಳ್ಳಿ ಗಳ ಆಭರಣಗಳ ಭಂಡಾರವೇ ಸಿಕ್ಕಿತು.
ಆ ವ್ಯಕ್ತಿಗೆ ಬಹಳ ಸಂತೋಷವಾಯಿತು ಮತ್ತು ಆಸೆ ಹುಟ್ಟಿತು. ಮತ್ತೊಂದು ದೀಪ ಹಚ್ಚಿ ನೋಡೋಣ ಎಂದು ಎರಡನೇ ದೀಪ ಹಚ್ಚಿ ಪಶ್ಚಿಮ ದಿಕ್ಕಿನ ಕಡೆ ಹೊರಟನು.
ಒಂದು ನಿರ್ಜನ ತಾಣದಲ್ಲಿ ಆ ದೀಪ ಕೆಟ್ಟಿತು. ಅಲ್ಲಿ ಮಣ್ಣನ್ನು ಅಗೆದಾಗ ಅಲ್ಲಿ ಬಂಗಾರದ ಹಳೆಯ ಕಾಲದ ನಾಣ್ಯಗಳ ರಾಶಿಯೇ ಸಿಕ್ಕಿತು.
ಅವನ ಆಸೆ ಮತ್ತು ಉತ್ಸಾಹ ಗರಿಗೆದರಿತು. ಮೂರನೇ ದೀಪವನ್ನು ಹಚ್ಚ ಬೇಕೆಂದು ತುಡಿತ ಹೆಚ್ಚಾಗಿ, ಮೂರನೆ ದೀಪವನ್ನು ಹಚ್ಚಿ ಬೌದ್ಧ ಬಿಕ್ಷು ಹೇಳಿದಂತೆ ಉತ್ತರ ದಿಕ್ಕಿನ ಕಡೆ ನಡೆದನು. ಸ್ವಲ್ಪ ದೂರ ಹೋಗುತ್ತಿದ್ದಂತೆ ದೊಡ್ಡ ಮರದ ಕೆಳಗೆ ಆ ದೀಪ ಆರಿತು. ಮರದ ಬುಡದಲ್ಲಿ ಅಗೆದಾಗ, ವಜ್ರ ವೈಡೂರ್ಯ ನವರತ್ನಗಳು ತುಂಬಿದ ಸಂಪತ್ತಿನ ಕೊಪ್ಪರಿಗೆ ಅಲ್ಲಿತ್ತು.
ಮನದಣಿಯೇ ನೋಡಿದನು, ನೋಡಿದಷ್ಟು ಶ್ರೀಮಂತ ತರುಣನ ಮನದಲ್ಲಿ ಮತ್ತಷ್ಟು ಸಂಪತ್ತು ಬೇಕು ಎನ್ನುವ ಹಂಬಲ ಹೆಚ್ಚಿತು. ನಾಲ್ಕನೇ ದೀಪ ಹಚ್ಚುವ ಮುನ್ನ ಅವನ ಮನಸ್ಸಿನಲ್ಲಿ ದೂರಾಲೋಚನೆ ಹುಟ್ಟಿತು.
ಮೂರು ದೀಪ ಹಚ್ಚಿ ಹಿಡಿದು ಬಂದಿರುವ ದಿಕ್ಕಿನಲ್ಲೇ, ಅಷ್ಟು ಸಂಪತ್ತು ಇರಬೇಕಾದರೆ, ನಾಲ್ಕನೇ ದಿಕ್ಕಿನಲ್ಲಿ ಇನ್ನೆಷ್ಟು ಸಂಪತ್ತು ಇರಬಹುದು? ಬೌದ್ಧ ಬಿಕ್ಷು ಅದನ್ನೆಲ್ಲ ತಾನು ತೆಗೆದುಕೊಳ್ಳಬೇಕೆಂದು ಅಂದುಕೊಂಡಿರಬೇಕು. ಅದಕ್ಕಾಗಿ ನನಗೆ ನಾಲ್ಕನೇ ದೀಪ ಹಚ್ಚಿ ಆ ದಿಕ್ಕಿಗೆ ಹೋಗಬೇಡ ಎಂದು ಹೇಳಿರಬೇಕು.
ನಾನು ಸುಮ್ಮನಿರುವುದಿಲ್ಲ ನಾಲ್ಕನೇ ದಿಕ್ಕಿಗೆ ಹೋಗುತ್ತೇನೆ. ಅಲ್ಲಿರುವ ಸಂಪತ್ತನ್ನೆಲ್ಲ ನನ್ನದಾಗಿಸಿಕೊಳ್ಳುತ್ತೇನೆ ಎಂಬ ಉತ್ಸಾಹದಲ್ಲಿ ನಾಲ್ಕನೇ ದೀಪವನ್ನು ಹಚ್ಚಿದ. ಮತ್ತು ದಕ್ಷಿಣ ದಿಕ್ಕಿನ ಕಡೆ ನಡೆದನು. ಅದು ಒಂದು ಸ್ಥಳದಲ್ಲಿ ದೀಪ ನಿಂತಿತು. ಅಲ್ಲಿ ಮಣ್ಣನ್ನು ಅಗೆದನು. ಒಳಗೆ ನೆಲಮಾಳಿಗೆ ಇದ್ದು ಒಳಹೋಗಲು ಒಂದು ಬಾಗಿಲು ಕಂಡಿತು ಅದನ್ನು ತೆಗೆದು ಒಳಗೆ ಹೋದನು..!
ಒಳಗೆ ಅದ್ಭುತವಾದ, ವಿಶಾಲವಾದ ಅರಮನೆ, ದೇವಲೋಕದ ವೈಭವವೇ ಅಲ್ಲಿ ತುಂಬಿತ್ತು. ಅವನು ಹೋದಲ್ಲೆಲ್ಲ ಪ್ರತಿಯೊಂದು ಕೋಣೆ ಬಾಗಿಲುಗಳನ್ನು ತೆಗೆದುಕೊಳ್ಳುತ್ತಾ ಹೋದ. ಆ ಕೋಣೆಗಳಲ್ಲಿ ಸಂಪತ್ತಿನ ಸಾಮ್ರಾಜ್ಯವೇ ತುಂಬಿ ತುಳುಕಿತ್ತು. ಅವನು ಹೀಗೆಯೇ ನೋಡುತ್ತಾ ನೋಡುತ್ತಾ ಮುಂದೆ ಮುಂದೆ ನಡೆಯುತ್ತಾ ಇದ್ದನು. ಆಗ ಅವನಿಗೆ ದೂರದಲ್ಲಿ ಯಾರೋ ಬೀಸಕಲ್ಲಿನಿಂದ ಬೀಸುತ್ತಿರುವ ಸದ್ದು ಕೇಳಿತು. ಆ ಸದ್ದು ಬಂದ ದಿಕ್ಕಿಗೆ ಹೋದನು. ಅಲ್ಲಿಯ ಬಾಗಿಲನ್ನು ತೆಗೆದು ನೋಡುತ್ತಾನೆ. ಅಲ್ಲೊಬ್ಬ ಅಜ್ಜನು ಬಗ್ಗಿಕೊಂಡು ಬೀಸೆಕಲ್ಲಿನಲ್ಲಿ ಹಿಟ್ಟು ಬೀಸುತ್ತಿದ್ದನು.
ಅವನನ್ನು ನೋಡಿದ ಶ್ರೀಮಂತ ಸುಂದರ ತರುಣ, ಏಯ್ ನೀನು ಯಾರು? ನೀನು ಏಕೆ ಇಲ್ಲಿಗೆ ಬಂದೆ? ಅದು ಹೇಗೆ ಬಂದೆ? ಎಂದು ಕೇಳಿದಾಗ, ಹಿಟ್ಟು ಬೀಸುತ್ತಿದ್ದ ಮುದುಕ ಹೇಳಿದನು, ಬಾಪ್ಪ ಗೆಳೆಯ ನನಗೆ ಈ ಹಿಟ್ಟು ಬೀಸಿ ಸಾಕಾಗಿದೆ ಸ್ವಲ್ಪ ನೀನು ಬೀಸಿದರೆ ನೀನು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇನೆ ಎಂದನು.
ತರುಣ ಯೋಚಿಸಿದ, ಓಹೋ ಈ ಮುದುಕನಿಗೆ ಇನ್ನು ಎಷ್ಟೆಷ್ಟು ಸಂಪತ್ತಿನ ಜಾಗಗಳು ತಿಳಿದಿವೆಯೋ? ಅವುಗಳನ್ನೆಲ್ಲ ನಾನೇ ತಿಳಿದುಕೊಳ್ಳಬೇಕು ಎಂದು ಯೋಚಿಸಿ, ಆಯ್ತು ತಾತ ನೀವು ಬನ್ನಿ ಎಂದು ಅವನು ಗೋಧಿ ಹಿಟ್ಟು ಬೀಸಲು ಕುಳಿತನು. ಆ ಮುದುಕನು ತಕ್ಷಣ ಎದ್ದು ದೂರ ಬಂದು ಮೈಮುರಿದು ಸಂತೋಷದಿಂದ ಮುಗಿಲು ಮುಟ್ಟುವಂತೆ ಹರ್ಷದಿಂದ ಕುಣಿದು ನಗಲು ಶುರು ಮಾಡಿದನು. ಅಂಥ ನಗು ಇದುವರೆಗೂ ಆ ಮುದುಕ ಎಂದೂ ನಕ್ಕೆ ಇಲ್ಲವೇನೋ ಎಂಬಂತಿತ್ತು.
ಸುಂದರ ತರುಣನಿಗೆ ಮತ್ತೂ ಆಶ್ಚರ್ಯವಾಯಿತು. ನೀನೇಕೆ ಅಷ್ಟೊಂದು ನಗುತ್ತಿರುವೆ? ಎಂದು ಅವನು ಹೇಳುವ ಕಾರಣವನ್ನು ತಿಳಿಯಲು ಬೀಸೆಕಲ್ಲು ಬೀಸುವುದನ್ನು ನಿಲ್ಲಿಸಲು ಹೊರಟನು. ತಕ್ಷಣ ಮುದುಕ ಹೇಳಿದನು ಬೀಸುವುದನ್ನು ಅಪ್ಪಿ ತಪ್ಪಿಯು ನಿಲ್ಲಿಸಬೇಡ. ನೀನು ಬೀಸುವುದನ್ನು ನಿಲ್ಲಿಸಿದರೆ, ಇಲ್ಲಿರುವ ಈ ಸುಂದರ ಅರಮನೆ ಕಳಚಿ ಬೀಳುತ್ತದೆ.
ಇಂದಿನಿಂದ ಈ ಅರಮನೆ ಇಲ್ಲಿರುವ ಸಂಪತ್ತು, ಈ ಬೀಸೆ ಕಲ್ಲು, ಎಲ್ಲವೂ ನಿನ್ನದೇ ಆದರೆ ಸದಾ ಕಾಲವು ನೀನು ಬೀಸುತ್ತಲೇ ಇರಬೇಕು ಕ್ಷಣವೂ ನಿಲ್ಲಿಸುವಂತಿಲ್ಲ. ನಿಲ್ಲಿಸಿದ ಕ್ಷಣವೇ ಅರಮನೆಯು ಬಿದ್ದು ನೀನು ಸತ್ತು ಹೋಗುವೆ ಎಂದು ಹೇಳಿ, ಮುದುಕ ದೀರ್ಘವಾಗಿ ಉಸಿರಾಡಿ, ಹೇಳಿದನು. ನಾನು ಸಹ ನಿನ್ನ ಹಾಗೆ ದುರಾಸೆಯಿಂದ ನಾಲ್ಕನೇ ದೀಪವನ್ನು ಹಚ್ಚಿ ಇಲ್ಲಿಗೆ ಬಂದೆನು ಬಂದ ದಿನದಿಂದಲೇ ಈ ಬೀಸುವ ಕೆಲಸ ನನ್ನದಾಗಿತ್ತು. ನನ್ನ ಯೌವ್ವನವನ್ನು ಈ ಅರಮನೆಯಲ್ಲಿ ಹಿಟ್ಟು ಬೀಸುತ್ತಲೇ ಕಳೆದಿದ್ದೇನೆ. ಎಂದು ಹೊರಡುವುದರಲ್ಲಿ ಇದ್ದನು.
ಈ ದುರಾಸೆ ಯುವಕ, ನೀವು ಹೋಗುವುದಕ್ಕೆ ಮೊದಲು ನಾನು ಈ ಬಂಧನದಿಂದ ಬಿಡುಗಡೆಯಾಗುವುದು ಯಾವಾಗ ಎಂಬುದನ್ನು ತಿಳಿಸಿ ಎಂದನು. ಆಗ ಆ ಮುದುಕನು, ಯಾರಾದರೂ ದುರಾಸೆ ಇರುವ ಮನುಷ್ಯ ಬರುವವರೆಗೂ ನೀನು ಇದರಿಂದ ಪಾರಾಗಲು ಸಾಧ್ಯವೇ ಇಲ್ಲ. ಎಂದು ಅವನು ಹೊರಟು ಹೋದನು.
ದುರಾಸೆಯ ಶ್ರೀಮಂತ ತರುಣ ತನ್ನ ದುರಾಸೆಗೆ ತಾನೇ ಶಪಿಸಿಕೊಳ್ಳುತ್ತಾ, ಮತ್ತೊಬ್ಬ ದುರಾಸೆ ಮನುಷ್ಯನ ಬರುವಿಕೆಗಾಗಿ ಕಾಯುತ್ತಾ ಇದ್ದನು.
ಬರಹ: ಆಶಾ ನಾಗಭೂಷಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….