ಬೆಂಗಳೂರು, (ಆಗಸ್ಟ್ 31): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಹಿಂಪಡೆಯಬೇಕು ಎನ್ನುವ ಆಗ್ರಹ ಹಾಗೂ ರಾಜ್ಯಪಾಲರ ಪಕ್ಷಪಾತಿ ನಿಲುವನ್ನು ಖಂಡಿಸಿ ಶನಿವಾರ ಬೆಳಗ್ಗೆ ಕೆಪಿಸಿಸಿ ವತಿಯಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ.
ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಪರೇಡ್ ನಡೆಸಲು ತೀರ್ಮಾನಿಸಿರುವ ಕಾಂಗ್ರೆಸ್, ಆರಂಭದಲ್ಲಿ ಕಾರ್ಯ ಕರ್ತರನ್ನು ಸೇರಿಸಿಕೊಂಡು ಬೃಹತ್ ಮಟ್ಟದಲ್ಲಿ ಪರೇಡ್ ನಡೆಸಲು ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ನಿಯೋಗದ ಭೇಟಿಗೆ ರಾಜ್ಯಪಾಲರ ಥಾವರ್ ಚಂದ್ ಗೆಹೋಟ್ ಒಪ್ಪಿಗೆ ನೀಡಿರುವು ದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವರು, ವಿಧಾನಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಮಾತ್ರ ರಾಜಭವನ ಚಲೋದಲ್ಲಿ ಭಾಗವಹಿಸಲಿದ್ದಾರೆ.
ಬೆ.11ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಯಿಂದ ಆರಂಭಗೊಂಡು, ರಾಜಭವನದಲ್ಲಿ ಜಾಥಾ ಅಂತ್ಯಗೊಳ್ಳಲಿದೆ. ಸಿದ್ದರಾಮಯ್ಯ ಅವರ ವಿರುದ್ಧ ಅನುಮತಿ ನೀಡಿರುವ ಪ್ರಾಸಿಕ್ಯೂಷನ್ ಹಿಂಪಡೆಯಬೇಕು ಎನ್ನುವ ಆಗ್ರಹದೊಂದಿಗೆ, ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಅಭಿಯೋಜನೆಗೆ ಅನುಮತಿ ನೀಡಬೇಕು ಎನ್ನುವ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿ ಹಲವರ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರ ಮುಂದಿರುವ ಎಲ್ಲ ಪ್ರಕರಣಗಳ ಅಭಿಯೋಜನೆಗೆ ಅನುಮತಿ ನೀಡಬೇಕು.
ವಿಶೇಷವಾಗಿ ಕೆಲವು ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ನೀಡಿಲ್ಲ. ಆದರೆ ಪ್ರಾಥಮಿಕ ತನಿಖೆ ನಡೆಯದಿದ್ದರೂ ಸಿಎಂ ವಿರುದ್ಧ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಈ ಧೋರಣೆ ಖಂಡನೀಯ. ಈ ತಾರತಮ್ಯ ಏಕೆ? ಎಂದು ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….