ಮಾನವನೆಂಬ ಜೀವಿಯೊಳಗೆ ಯಾವೆಲ್ಲ ಭಾವನೆಗಳು, ಸಂಘರ್ಷಗಳು, ರಾಗ ದ್ವೇಷವೇ ಮೊದಲಾದ ದ್ವಂದ್ವಗಳು ಮನೆ ಮಾಡಿಕೊಂಡಿರುವುದೋ ಅದೆಲ್ಲದರ ಅನಾವರಣವೇ ಮಹಾಭಾರತ. ಇಲ್ಲಿ ಮನಶ್ಶಾಸ್ತ್ರವಿದೆ, ರಾಜಕಾರಣವಿದೆ, ಪ್ರೀತಿ ವಿಶ್ವಾಸವಿದೆ, ಕ್ರೌರ್ಯವಿದೆ, ದ್ರೋಹ ಚಿಂತನವಿದೆ, ಮುಗ್ಧತೆಯಿದೆ ಅಂದರೆ ಸರ್ವಾಂಗ ಸುಂದರವಾದ, ಸಾರ್ವಕಾಲಿಕವಾದ, ಸರ್ವತ್ರವಾದ, ಸರ್ವರಿಗೂ ಅನ್ವಯವಾದ ವಿಶಿಷ್ಟವಾದ ಕಥಾನಕದ ಹೂರಣವೇ ಇದೆ… ಇದು ಮಹಾಭಾರತ.
ಇಲ್ಲಿ ದುರ್ಯೋಧನಾದಿಗಳು ಕೆಟ್ಟವರೆಂದು ಯುಧಿಷ್ಟಿರಾದಿಗಳು ಸಜ್ಜನರೆಂದು ಸ್ಥೂಲವಾಗಿ ಹೇಳಬಹುದಾದರೂ ಅವರವರ ಭಾವಕ್ಕೆ ತರ್ಕಕ್ಕೆ ಅನುಗುಣವಾಗಿ ಈ ನಿರ್ಣಯದಲ್ಲಿಯೂ ಭಿನ್ನ ನೋಟಗಳಿರುವುದೂ ಅಷ್ಟೇ ಸತ್ಯ
ಯುಧಿಷ್ಟಿರನ ಧರ್ಮಪ್ರಜ್ಞೆ ಇರಬಹುದು, ದುರ್ಯೋಧನನ ಅಧರ್ಮಪ್ರಜ್ಞೆ ಇರಬಹುದು ಯಾವುದು ಒಂದು ಮಿತಿಯಲ್ಲಿದ್ದರೆ ಅದು ಸಹ್ಯವಾದೀತು ಅತಿಯಾದರೆ ಅಧರ್ಮದಂತೆ ಧರ್ಮವೂ ಅಸಹ್ಯವೇ ಆದೀತೆನ್ನುವುದಕ್ಕೂ ಮಹಾಭಾರತವೇ ಸಾಕ್ಷಿ. ಎಷ್ಟೋ ಕಡೆಯಲ್ಲಿ ಯುಧಿಷ್ಟಿರನಿಗೆ ಅನ್ಯಾಯವಾಗಲು ಆತನ ಅತಿಯಾದ ಧರ್ಮವೇ ಕಾರಣವಾಗುತ್ತದೆ.
ಯಾವುದು ಸಮಾಜಕ್ಕೆ ಅಹಿತವಾಗಿರುವುದೋ ರಾಜ್ಯಕ್ಕೇ ಮುಳುವಾಗುವುದೋ ಅಂತಹ ವಿಚಾರಗಳನ್ನು ನಿರ್ಣಯಿಸುವಾಗ ತನ್ನ ಸ್ವಾರ್ಥವನ್ನು ಬದಿಗಿಟ್ಟು ವ್ಯವಹರಿಸುವುದೇ ಧರ್ಮ.
ದ್ಯೂತದ ಸಮಯದಲ್ಲಿ ತನ್ನೊಡನೆ ತನ್ನ ತಮ್ಮಂದಿರನ್ನೂ, ಹೆಂಡತಿಯನ್ನೂ ಹಾಗೇ ಸರ್ವ ಸಂಪತ್ತನ್ನೂ ಕಳಕೊಂಡಿದ್ದಾದರೆ ಅದು ಧರ್ಮ ಎಂಬ ಅತಿಯಾದ ಭಾವನೆಯಿಂದಲೇ. ಅದೇರೀತಿ ತಮ್ಮಂದಿರು ಹೆಂಡತಿ ಎಲ್ಲರೂ ಅತಿಯಾದ ವಿನೀತ ಭಾವದಿಂದಲೇ ಯುಧಿಷ್ಟಿರನನ್ನು ಪ್ರಶ್ನಾತೀತ ನಾಯಕನೆಂದು ಒಪ್ಪಿದ್ದರಿಂದಲೇ ಪಾಂಡವರಿಗೆ ಅನ್ಯಾಯವಾದದ್ದು.
ಅಷ್ಟು ದೊಡ್ಡ ವಂಶದ ರಾಜನಾಗಿದ್ದೂ ಹೆಜ್ಜೆ ಹೆಜ್ಜೆಗೂ ಶಕುನಿಯ ಮೋಸವನ್ನು ಅರಿಯದೆ ಬರಿದೆ ಧರ್ಮ ಧರ್ಮವೆಂಬ ಮಂತ್ರದಿಂದ ನಗೆಪಾಟಲಾಗುವಂತೆ ವರ್ತಿಸುವ ಯುಧಿಷ್ಟಿರನ ರಾಜನೀತಿ ನಿಜವಾಗಿಯೂ ಶೋಚನೀಯವೇ.
ಅತಿಯಾದರೆ ಅಮೃತವೂ ವಿಷವೇ ಎಂದು ಇದರಿಂದ ತಿಳಿಯುತ್ತದೆ. ಹಾಗೆಯೇ ದುರ್ಯೋಧನನಾಗಲಿ, ದುಷ್ಯಾಸನನಾಗಲಿ, ಕರ್ಣನಾಗಲಿ ಅಷ್ಟೊಂದು ಹದ್ದು ಮೀರಿ ವರ್ತಿಸುತ್ತಿರಲೂ ಯುಧಿಷ್ಟಿರನ ಅತಿಯಾದ ಧರ್ಮಪ್ರಜ್ಞೆಯೇ ಕಾರಣ.
ಇತ್ತ ಯುಧಿಷ್ಟಿರನ ಪೂರ್ಣ ಅಂಕೆಯಲ್ಲಿರದೆ ರಾಜ್ಯದ ಹಿತದೃಷ್ಟಿಯಿಂದ ಸ್ವಲ್ಪಮಾತ್ರವಾದರೂ ಭೀಮಾದಿಗಳು ಸ್ವಂತಿಕೆಯಿಂದ ವರ್ತಿಸಿದ್ದರೆ, ಶಕುನಿಯನ್ನು ಮೊದಲೆ ಮುಗಿಸಿದ್ದರೆ, ಪಾಂಡು ರಾಜ ಕಾಡಿಗೆ ಹೋದರೂ ಮಾದ್ರಿಯ ಸಂಗ ಮಾಡದೆ ಇದ್ದಿದ್ದರೆ ಚಿತ್ರಣ ಭಿನ್ನವಾಗಿರುತ್ತಿತ್ತು. ಹಾಗೆಂದು ನಾವು ಹೇಳಿದಂತೆ ರೆ.. ರೆ.. ಗಳು ಸೇರಿಸಲಾಗದು. ಆದರೂ ನಾವು ಈ ರೆ…ರೆ…ಗಳಿಂದ ಪಾಠ ಕಲಿಯಬಹುದು.
ಎದುರಾಳಿಯು ದುರ್ಬಲನಾದಾಗ, ಮೊದಲೇ ದುಷ್ಟರಾದಂಥ ದುರ್ಯೋಧನಾದಿಗಳು ಅದರ ದುರುಪಯೋಗವನ್ನು ಪಡಕೊಳ್ಳದಿರುವರೇ..? ಯಾವುದೇ ಸಂದರ್ಭದಲ್ಲಿ ಯಾರು ತನ್ನ ದೌರ್ಬಲ್ಯವನ್ನು ಇತರರಿಗೆ ಬಿಟ್ಟುಕೊಡುವನೋ ಆವಾಗ ಆತನ ಅಧಃಪತನ ಪ್ರಾರಂಭವಾದಂತೆ. ಯುಧಿಷ್ಟಿರನಿಗೆ ಧರ್ಮದ ದೌರ್ಬಲ್ಯ, ದುರ್ಯೋಧನನಿಗೆ ಅಹಂಕಾರದ ದೌರ್ಬಲ್ಯ, ಶಕುನಿಗೆ ದ್ವೇಷದ ದೌರ್ಬಲ್ಯ, ದೃತರಾಷ್ಟ್ರನಿಗೆ ಪುತ್ರ ವಾತ್ಸಲ್ಯದ ದೌರ್ಬಲ್ಯ. ಆಯಾ ವ್ಯಕ್ತಿಯ ದೌರ್ಬಲ್ಯ ಇನ್ನೊಬ್ಬನಿಗೆ ಪ್ರಾಬಲ್ಯವನ್ನು ಸೃಷ್ಟಿಸಿ ಕೊಡುತ್ತದೆ.
ರಾಮಾಯಣವಾಗಲಿ ಮಹಾಭಾರತವಾಗಲಿ ತನ್ನ ತನ್ನ ದೌರ್ಬಲ್ಯವನ್ನು ಬಿಟ್ಟು ಕೊಟ್ಟಿದ್ದರಿಂದಲೇ ಭಿನ್ನವಾಗಿ ಹುಟ್ಟಿಕೊಂಡಿದೆ. ಅಂದು ದಶರಥ ಕೂಡ ಕೈಕೇಯಿಗೆ ‘ಸೂರ್ಯ ವಂಶದವರು ವಚನ ಭ್ರಷ್ಟರಾಗಲಾರರು’ ಎಂಬ ದೌರ್ಬಲ್ಯಕ್ಕೆ ಒಳಗಾಗಿ ದೇಶದ, ಪ್ರಜೆಗಳ ಮಾತ್ರವಲ್ಲ ತನ್ನ ಸಂಸಾರದ ಅಧೋಗತಿಗೆ ಕಾರಣನಾದನು.
ಒಂದು ವೇಳೆ ಕೈಕೇಯಿ ರಾಮನನ್ನು ಕಾಡಿಗೆ ಅಟ್ಟಬೇಕು ಅನ್ನುವ ಬದಲು ರಾಮನನ್ನು ಕೊಲ್ಲಬೇಕು ಎಂದಿದ್ದರೆ ವಚನ ಪಾಲನೆ ಎನ್ನುವುದು ಎಷ್ಟೊಂದು ಅಪಹಾಸ್ಯಕ್ಕೆ ಒಳಗಾಗುತ್ತಿತ್ತು. ಏನೇ ಇರಲಿ ಈ ಮಹಾಭಾರತ, ರಾಮಾಯಣದಂಥ ಗ್ರಂಥಗಳಲ್ಲಿ ಅನುಭವಗಳ ಪಾಠಗಳು ಅನಂತವಾಗಿವೆಯೆಂದೇ ಹೇಳಬಹುದು.
ಅವರವರ ಭಾವಕ್ಕೆ ಅವರವರ ತಿಳಿವಿನಲಿ ತೆರೆದುಕೊಳ್ಳುವದೇ ಇದರ ಮಹಿಮೆ.
ಕೃಪೆ: ಸಾಮಾಜಿಕ ಜಾಲತಾಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….