ದೊಡ್ಡಬಳ್ಳಾಪುರ, (ಆಗಸ್ಟ್.29); ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವಾರು ಭಾಗಗಳಲ್ಲಿ ಕೃಷಿ ಜಮೀನಿನಲ್ಲಿ ಅಡಿಕೆ ಬೆಳೆ ಹೆಚ್ಚಾಗುತ್ತಿರುವುದು ಕಳೆದ ಎರಡು ಮೂರು ವರ್ಷಗಳಿಂದ ಕಂಡು ಬರುತ್ತಿದೆ.
ಹೊಸದಾಗಿ ಅಡಿಕೆ ನಾಟಿ ಮಾಡಿದ ಜಮೀನುಗಳಲ್ಲಿ ಅಡಿಕೆ ಸಾಲುಗಳ ಮಧ್ಯೆ ಇರುವ ಭಾಗದಲ್ಲಿ ವಿವಿಧ ರೀತಿಯ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಸಮರ್ಪಕವಾಗಿ ಜಾಗ ಬೆಳೆಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದು ಎನ್ನುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ ವತಿಯಿಂದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೊಸದಾಗಿ ನಾಟಿ ಮಾಡಿದ ಅಡಿಕೆ ತೋಟಗಳಲ್ಲಿ ಬೆಳೆಯ ಬಹುದಾದ ಅಂತರ ಬೆಳೆಗಳು: ಸೂಕ್ತ ಆಹಾರ ಬೆಳೆಗಳು – ರಾಗಿ, ಅಲಸಂದೆ, ಹೆಸರು, ಉದ್ದು, ಹುರುಳಿಕಾಳು ಇತ್ಯಾದಿಗಳನ್ನು ನಾಟಿ ಮಾಡಿದ 3 ರಿಂದ 5 ವರ್ಷಗಳ ಕಾಲ ಬೆಳೆಯಬಹುದಾಗಿದೆ.
ವಿಶೇಷವಾಗಿ ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ವಾತಾವರಣದ ಸಾರಜನಕವನ್ನು ಅವುಗಳು ಬೇರುಗಂಟಿನಲ್ಲಿರುವ ರೈಜೋಬಿಯಂ ಸೂಕ್ಷ್ಮಾಣುವಿನ ಮೂಲಕ ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತವೆ ಎಂದು ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪರವರು ತಾಂತ್ರಿಕ ಮಾಹಿತಿ ನೀಡಿದರು.
ಅಡಿಕೆಯನ್ನು 7 x 8 ಅಡಿ, 8 x 8 ಅಡಿ, 9x 9 ಅಡಿ, 8 x 9 ಅಡಿ ವಿವಿಧ ಅಂತರದಲ್ಲಿ ರೈತರು ನಾಟಿ ಮಾಡುತ್ತಿದ್ದಾರೆ. ಅಡಿಕೆಯಲ್ಲಿ ಪೋಷಕಾಂಶಗಳ ಮಹತ್ವ ಮತ್ತು ನೀರು ನಿರ್ವಹಣೆ, ಬೇಸಿಗೆಯಲ್ಲಿ ತೇವಾಂಶ ಹಾಗೂ ಬೆಳೆಯ ರಕ್ಷಣೆಯ ಕುರಿತು ಉಪನ್ಯಾಸ ನೀಡಿದರು.
ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯಲು ಅನುಸರಿಸಬೇಕಾದ ಕೆಲವು ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಅಡಿಕೆಗೆ ಸೂಕ್ತ ತೋಟಗಾರಿಕೆ ಬೆಳೆಗಳು: ಬೀನ್ಸ್, ಕ್ಯಾರೆಟ್, ಬೀಟ್‌ರೂಟ್, ಕಡ್ಡಿ ಬೀನ್ಸ್, ಬಾಳೆ, ಚಪ್ಪರದ ಅವರೆ ಇತ್ಯಾದಿಗಳನ್ನು ಮೊದಲು 3 ವರ್ಷಗಳವರೆಗೆ ಬೆಳೆಯಬಹುದು.
ಹತ್ತು ವರ್ಷಗಳ ನಂತರ ಅಡಿಕೆಯಲ್ಲಿ ಅಂತರ ಬೆಳೆಯಾಗಿ ವೀಳ್ಯದೆಲೆ, ಕಾಳು ಮೆಣಸು, ಏಲಕ್ಕಿ, ಕೊಕೋನಾ, ಜಾಯಿಕಾಯಿ ಇತ್ಯಾದಿ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಬಹುದಾಗಿದ್ದು ರೈತರು ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆಯೆಂದು ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯವಸಾಯ ಪೂರಕ ಚಟುವಟಿಕೆಗಳಿಗೆ ಮಂತಾರ್ ಲೀ ಸೋಷಿಯಲ್ ಇನ್ನೋವೇಷನ್ ಫೆಡರೇಶನ್, ಬೆಂಗಳೂರು ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯ ಕಾರ್ಪೋರೇಟ್ ಸೇವಾ ಜವಾಬ್ದಾರಿ ಉಪಕ್ರಮಗಳ ಅಡಿಯಲ್ಲಿ ಪ್ರಾಯೋಜಿಸಲಾಗುತ್ತಿದೆ ಎಂದು ರೋಹಿಣಿ ಅವರು ತಿಳಿಸಿದರು.
ಕೇಂದ್ರದ ವತಿಯಿಂದ ರೈತರುಗಳಿಗೆ ಅಡಿಕೆ ಬೆಳೆಯಲ್ಲಿ ಪ್ರಾತ್ಯಕ್ಷಿಕೆಗಳು, ಸುಗಂಧರಾಜ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿಗಳು ಕುರಿತು ಹಲವು ತರಬೇತಿ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ರೈತರ ತಾಕುಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಸ್ಥರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಸಹಳ್ಳಿ ಗ್ರಾಮದ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….