ಒಬ್ಬ ಶ್ರೀಮಂತ ತನ್ನ ನಾಯಿಯನ್ನು ಕರೆದುಕೊಂಡು ಆಫ್ರಿಕಾದಲ್ಲಿ ಸಫಾರಿಗೆ ಹೋಗಿದ್ದ. ಒಂದು ದಿನ ಆ ನಾಯಿ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತ ಯಜಮಾನನನ್ನು ಬಿಟ್ಟು ಬಹುದೂರ ಹೋಗಿ ಬಿಟ್ಟಿತ್ತು.
ದಾರಿ ತಪ್ಪಿದ ನಾಯಿ ಅಲ್ಲಿಲ್ಲಿ ಅಲೆಯುತ್ತಿರುವಾಗ ಚಿರತೆಯೊಂದು ತನ್ನ ಕಡೆ ವೇಗವಾಗಿ ಬರುತ್ತಿರುವುದನ್ನು ಕಂಡಿತು. ನಾಯಿಗೆ ತಾನು ದೊಡ್ಡ ಅಪಾಯಕ್ಕೆ ಸಿಕ್ಕಿರುವುದು ಅರಿವಾಯಿತು. ಚಿರತೆಗೆ ಇವತ್ತಿನ ಲಂಚ್ ನಾನೇ. ಇದರ ಕೈಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಅದು ಯೋಚಿಸಿತು.
ನಾಯಿ ಅಲ್ಲಿಯೇ ಬಿದ್ದಿದ್ದ ಎಲುಬಿನ ರಾಶಿ ನೋಡಿತು. ತಕ್ಷ ಣ ಅದಕ್ಕೊಂದು ಉಪಾಯ ಹೊಳೆಯಿತು. ಕೂಡಲೇ ಚಿರತೆಯ ಕಡೆಗೆ ಬೆನ್ನು ಮಾಡಿ ಕುಳಿತುಕೊಂಡು ಒಂದು ಎಲುಬಿನ ಚೂರನ್ನು ಜಗಿಯಲಾರಂಭಿಸಿತು. ಚಿರತೆ ಹತ್ತಿರಕ್ಕೆ ಬಂದು ನಾಯಿಯ ಮೇಲೆ ಹಾಯಲು ತಯಾರಾದಾಗ, ನಾಯಿ ಗಟ್ಟಿ ಧ್ವನಿಯಲ್ಲಿ, ಆಹಾ! ಎಂಥಾ ರುಚಿ ಈ ಚಿರತೆಯ ಮಾಂಸ. ಈ ಕಾಡಿನಲ್ಲಿ ಇನ್ನೂ ಚಿರತೆಗಳಿವೆಯಾ ಎಂದು ನೋಡಬೇಕು ಎಂದು ತನಗೆ ತಾನೇ ಹೇಳಿಕೊಂಡಿತು.
ಇದನ್ನು ಕೇಳಿಕೊಂಡ ಚಿರತೆ ಹೆದರಿ ಕಂಗಾಲಾಗಿ, ಬದುಕಿದೆಯಾ, ಬಡ ಜೀವವೇ ಎಂದು ಕಾಡಿನೊಳಗೆ ಓಡಿ ಹೋಯಿತು. ಆ ನಾಯಿ ಇನ್ನೇನು ನನ್ನನ್ನು ತಿಂದೇ ಬಿಡುತ್ತಿತ್ತು. ಕೂದಲೆಳೆಯಲ್ಲಿ ತಪ್ಪಿಸಿಕೊಂಡೆ ಎಂದು ಅದು ನೆಮ್ಮದಿಯ ಉಸಿರೆಳೆಯಿತು. ಇದನ್ನೆಲ್ಲ ಒಂದು ಕೋತಿ ಮರದ ಮೇಲೆ ಕುಳಿತುಕೊಂಡು ನೋಡುತ್ತಿತ್ತು. ಈ ನಾಯಿಯ ಉಪಾಯ ಬಳಸಿಕೊಂಡು ಚಿರತೆಯಿಂದ ನಾನು ರಕ್ಷ ಣೆ ಪಡೆಯಬಹುದು ಎಂದು ಯೋಚಿಸಿ ಚಿರತೆಯನ್ನು ಹುಡುಕಿಕೊಂಡು ವೇಗವಾಗಿ ಕಾಡಿನೊಳಗೆ ಹೋಯಿತು.
ಕೋತಿ ವೇಗವಾಗಿ ಹೋಗುವುದನ್ನು ನೋಡಿ ನಾಯಿಗೆ ಸಂಶಯ ಬಂತು. ಚಿರತೆಯನ್ನು ಕಂಡು ಕೋತಿ ನಡೆದದ್ದೆಲ್ಲವನ್ನೂ ಹೇಳಿತು. ಚಿರತೆಗೆ ಕೋಪ ನೆತ್ತಿಗೇರಿತು. ಕೇವಲ ಒಂದು ನಾಯಿ ನನ್ನನ್ನು ಮುಟ್ಠಾಳನನ್ನಾಗಿಸಿತು ಎಂದು ಅವಮಾನದಲ್ಲಿ ಅದರ ರಕ್ತ ಕುದಿಯಿತು. ಅದು ಕೋತಿಗೆ, ಗೆಳೆಯ ನನ್ನ ಬೆನ್ನ ಮೇಲೆ ಕುಳಿತುಕೋ. ಈಗ ನೋಡು, ಏನಾಗುತ್ತೆಯೆಂದು ಎಂದು ಸವಾಲು ಹಾಕಿತು.
ಕೋತಿಯೊಂದಿಗೆ ಬರುತ್ತಿರುವ ಚಿರತೆಯನ್ನು ಕಂಡು ನಾಯಿ, ಈಗೇನು ಮಾಡುವುದು? ಎಂದು ಯೋಚಿಸಿತು. ಓಡಿ ಹೋಗುವುದರಿಂದ ಪ್ರಯೋಜನವಿಲ್ಲ. ಉಪಾಯದಿಂದಲೇ ಪಾರಾಗಬೇಕು ಎಂದು ಯೋಚಿಸಿ ಚಿರತೆಯನ್ನು ಗಮನಿಸದಂತೆ ಅವುಗಳ ಕಡೆಗೆ ಬೆನ್ನು ಮಾಡಿ ಕುಳಿತುಕೊಂಡಿತು.
ಎಲ್ಲಿ ಹೋಯಿತು ಈ ಕೋತಿ? ಇನ್ನೊಂದು ಚಿರತೆಯನ್ನು ಹಿಡಿದು ತರುವುದಾಗಿ ಹೇಳಿ ಹೋದದ್ದು ಗಂಟೆ ಒಂದಾದರೂ ಬರಲಿಲ್ಲವಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿಕೊಂಡಿತು. ಚಿರತೆ ಮತ್ತು ಕೋತಿ, ಬಂದ ದಾರಿಗೆ ಸುಂಕವಿಲ್ಲ ಎಂದು ಓಡಿ ಹೋದವು.
ಕೃಪೆ: ಕೆ.ನಿರುಪಮಾ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….