ನವದೆಹಲಿ, (ಆಗಸ್ಟ್.27); ರೈತರ ಪ್ರತಿಭಟನೆ ವಿರುದ್ಧ ನಾಲಿಗೆ ಹರಿಬಿಟ್ಟು ಏರ್ಪೋರ್ಟ್ ನಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯಿಂದ ಕಪಾಳ ಮೋಕ್ಷಕ್ಕೆ ಒಳಗಾಗಿ ತೀವ್ರ ಮುಜುಗರಕ್ಕೆ ಒಳಗಾಗಿರುವ ನಟಿ, ಸಂಸದೆ ಕಂಗನಾ ರನೋತ್‌ಗೆ ಸ್ವ ಪಕ್ಷ ಬಿಜೆಪಿ ಕೂಡ ಛೀಮಾರಿ ಹಾಕಿದೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ನಟ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್ ಈ ಬಾರಿ ರೈತರ ಪ್ರತಿಭಟನೆ ಕುರಿತು ಆಡಿದ ಮಾತು ಪಕ್ಷಕ್ಕೆ ಸಂಕಟ ತಂದಿದೆ. ಅವರ ಬೆನ್ನಲ್ಲೇ, ಕಂಗನಾಗೆ ಛೀಮಾರಿ ಹಾಕಿರುವ ಬಿಜೆಪಿ ಮುಂದೆ ಇಂತಹ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.
ಮಾಧ್ಯಮವೊಂದಕ್ಕೆ ಭಾನುವಾರ ಸಂದರ್ಶನ ನೀಡಿದ್ದ ಕಂಗನಾ, ‘ಕೆಲವು ವರ್ಷಗಳ ಹಿಂದೆ 3 ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಪ್ರತಿಭಟನೆಗಳ ವೇಳೆ ದೇಶದಲ್ಲಿ ಮೋದಿ ಅವರ ಸಶಕ್ತ ಸರ್ಕಾರ ಇಲ್ಲದೇ ಹೋದರೆ ಬಾಂಗ್ಲಾದೇಶದಲ್ಲಿ ಉಂಟಾದ ಪರಿಸ್ಥಿತಿ ಭಾರತದಲ್ಲೂ ಆಗುತ್ತಿತ್ತು. ರೈತ ಪ್ರತಿಭಟನೆಗಳ ವೇಳೆ ಮೃತದೇಹಗಳು ನೇತಾಡುತ್ತಿ ದವು ಹಾಗೂ ಅತ್ಯಾಚಾರಗಳು ನಡೆದಿದ್ದವು’ ಎಂದಿದ್ದರು.
ಕಂಗನಾ ಹೇಳಿಕೆಯನ್ನು ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷ ಖಂಡಿಸಿವೆ ಹಾಗೂ ರೈತರಿಗೆ ಬಿಜೆಪಿ ಮಾಡಿದ ಅವಮಾನ ಇದು ಎಂದು ಟೀಕಿಸಿವೆ.
ಈ ನಡುವೆ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಹರ್ಯಾಣದಲ್ಲಿ ಬಿಜೆಪಿಗೆಈ ಹೇಳಿಕೆ ಸಂಕಷ್ಟ ತಂದೊಡ್ಡಿದ್ದು, ರೈತರ ಪ್ರತಿಭಟನಾ ಕೇಂದ್ರ ಆಗಿರುವ ಈ ರಾಜ್ಯದಲ್ಲಿ ಪಕ್ಷಕ್ಕೆ ಮುಳುವಾಗುವ ಸಂಭವ ಇದೆ. ಹೀಗಾಗಿ ಕಂಗನಾ ಹೇಳಿಕೆಗೆ ಹರ್ಯಾಣ ಬಿಜೆಪಿಗರೇ ವಿರೋಧ ವ್ಯಕ್ತಪಡಿಸಿದ್ದಾರೆ. ಕಂಗನಾ ಬಾಯಿಗೆ ವರಿಷ್ಠರ ಬೀಗ: ಇದರ ಬೆನ್ನಲ್ಲೇ ಬಿಜೆಪಿ ವರಿಷ್ಠರು ನಟಿಯ ಮೇಲೆ ಗರಂ ಆಗಿದ್ದು ಇನ್ನೆಂದೂ ಪಕ್ಷದ ನೀತಿಗೆ ಸಂಬಂಧಿಸಿದ ಹೇಳಿಕೆ ನೀಡದಂತೆ ತಾಕೀತು ಮಾಡಿ ದ್ದಾರೆ. ‘ಕಂಗನಾ ಅವರ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಅವರ ಹೇಳಿಕೆಗೆ ಬಿಜೆಪಿ ಅಸಮ್ಮತಿಯನ್ನು ವ್ಯಕ್ತಪಡಿಸುತ್ತದೆ.
ಪಕ್ಷದ ನೀತಿ ವಿಷಯಗಳ ಕುರಿತು ಹೇಳಿಕೆ ನೀಡಲು ಕಂಗನಾ ಅವರಿಗೆ ಅನುಮತಿ ಇಲ್ಲ ಅಥವಾ ಅಧಿಕಾರ ಇಲ್ಲ. ಭವಿಷ್ಯದಲ್ಲಿ ಅಂತಹ ಯಾವುದೇ ಹೇಳಿಕೆ ನೀಡದಂತೆ ಅವ ರಿಗೆ ನಿರ್ದೇಶನ ನೀಡಲಾಗಿದೆ’ ಎಂದು ಬಿಜೆಪಿ ಹೇಳಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….