ಬೆಂಗಳೂರು, (ಆಗಸ್ಟ್.26): ಕರ್ನಾಟಕ ಲೋಕಸೇವಾ ಆಯೋಗ (KPSC) ಇದೇ ತಿಂಗಳು 27ರಂದು ಸ್ವಾರ್ಥಕ್ಕಾಗಿ ತಾರತುರಿಯಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ದೂರಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಪರೀಕ್ಷೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಪರೀಕ್ಷೆ ಬರೆಯುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ತೊಂದರೆ ಕೊಡುವ ಹುನ್ನಾರ ಇದರಲ್ಲಿದೆ ಎಂದು ಆರೋಪಿಸಿದ್ದಾರೆ.
ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿರುವುದು ಸರಿಯಷ್ಟೆ. ಕೆಲವರ ಸ್ವಾರ್ಥಕ್ಕಾಗಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವ ಆರೋಪವಿದ್ದು, ಪರೀಕ್ಷೆ ಬರೆಯಲು ಅನೇಕ ದಿನಗಳಿಂದ ಪ್ರಾಮಾಣಿಕವಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ, ಅದರಲ್ಲಿಯೂ ವಿಕಲಚೇತನ ಅಭ್ಯರ್ಥಿಗಳಿಗೆ ತೊಂದರೆ ಕೊಡುವ ಹುನ್ನಾರ ಇದರಲ್ಲಿದೆ ಎಂದು ಅವರು ಹೇಳಿದ್ದಾರೆ.
ರಜೆ ದಿನ ಹೊರತುಪಡಿಸಿ ಇತರೆ ದಿನಗಳಲ್ಲಿ ಪರೀಕ್ಷೆ ನಡೆಸಿದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೂ ಸಮಸ್ಯೆ ಆಗುತ್ತದೆ. ಈ ಬಗ್ಗೆ ಅಭ್ಯರ್ಥಿಗಳು ಹಲವು ದಿನಗಳಿಂದ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ KPSC ಪರೀಕ್ಷೆ ನಡೆಸಲೇಬೇಕು ಎಂದು ಪಟ್ಟು ಹಿಡಿದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಅವರ ಕಾಳಜಿಯನ್ನು ನಿರ್ಲಕ್ಷಿಸಿದೆ ಮತ್ತು ಅವರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಹೊರಟಿರುವುದು ಅಕ್ಷಮ್ಯ ಎಂದಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡಲೇ ಕ್ರಮ ವಹಿಸಿ ಕೂಡಲೇ ಎಲ್ಲಾ ಅಭ್ಯರ್ಥಿಗಳಿಗೆ ಅನುಕೂಲವಾಗುವ ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಬೇಕು ಎಂದು ನಿಖಿಲ್ ಅವರು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….