ದೊಡ್ಡಬಳ್ಳಾಪುರ, (ಆಗಸ್ಟ್.26); ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೋಮವಾರ ನಗರದ ಹಲವು ಶ್ರೀಕೃಷ್ಣ, ವಿಷ್ಣು ಮಂದಿರ, ಮಠಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ ನಡೆಯಲಿದೆ. ಮಕ್ಕಳಿಗಾಗಿ ಕೃಷ್ಣ ಸೇರಿದಂತೆ ವಿವಿಧ ವೇಷ ಪ್ರದರ್ಶನ ಸೇರಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಂಚಾಮೃತ ಅಭಿಷೇಕ, ಉಯ್ಯಾಲೆ ಸೇವೆ, ವಿಶೇಷ ಅಲಂಕಾರ, 108 ಬಗೆಯ ಭಕ್ಷ್ಯಗಳ ನೈವೇದ್ಯ ಅರ್ಪಣೆ ಸೇರಿ ವಿವಿಧ ಬಗೆಯ ಪೂಜೆಗಳನ್ನು ದೇವಸ್ಥಾನಗಳಲ್ಲಿ ಆಯೋಜನೆ ಮಾಡಲಾಗಿದೆ.
ನಗರದ ಗಾಂಧಿನಗರದ ಖಿಲ್ಲೇ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ದೇವಾಲಯದಲ್ಲಿ ಬೆಳಿಗ್ಗೆ 6ಕ್ಕೆ ಅಭಿಷೇಕ, ವಿಶೇಷ ಅಲಂಕಾರ, 10.30ಕ್ಕೆ ಭಜನೆ, ಸಂಜೆ 4.30ಕ್ಕೆ ವಿಷ್ಣು ಸಹಸ್ರ ಪಾರಾಯಣ, 6 ಗಂಟೆಗೆ ಬಾಲ ಕೃಷ್ಣ ಲೀಲ ಅಂಗವಾಗಿ ಮಕ್ಕಳ ಕೃಷ್ಣ ರಾಧೆ ವೇಷಭೂಷಣ ಪ್ರದರ್ಶನ, 7 ಗಂಟೆ ಭರತ ನಾಟ್ಯ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
ನಗರದ ಕೆರೆಬಾಗಿಲು ಬಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಇಂದು ಎಚ್.ವಿ.ವಿ ಟ್ರಸ್ಟ್ ವತಿಯಿಂದ ವಿಶೇಷ ತೊಟ್ಟಿಲು ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬರುವುದರಿಂದ ದರ್ಶನ, ರಾಧಾಕೃಷ್ಣರ ಜುಲಾನ ಸೇವೆ ಸೇರಿದಂತೆ ವಿವಿಧ ಸೇವೆಗಳು, ಪ್ರಸಾದ ವಿತರಣೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಜೊತೆಗೆ ಭಕ್ತರಿಗೆ ಅವಲಕ್ಕಿ ಪ್ರಸಾದ, ಪುಳಿಯೊಗರೆ ಸೇರಿ ಪ್ರಸಾದ ವಿತರಣೆ ಆಗಲಿದೆ. ಹಲವರು ಉಪವಾಸ ವ್ರತವನ್ನೂ ಆಚರಿಸಲಿದ್ದಾರೆ.
ಮಕ್ಕಳಿಗಾಗಿ ಸ್ಪರ್ಧೆ: ವಿವಿಧೆಡೆ ಸಂಘ ಸಂಸ್ಥೆಗಳು, ಶಾಲೆ, ದೇವಸ್ಥಾನಗಳಿಂದ ಮಕ್ಕಳಿ ಗಾಗಿ ಶ್ರೀಕೃಷ್ಣ, ರಾಧೆಯರ ವೇಷಭೂಷಣ ಸ್ಪರ್ಧೆ, ಬಹುಮಾನ ವಿತರಣೆಯಂತ ಕಾರ್ಯ ಕ್ರಮ ಆಯೋಜಿಸಲಾಗಿದೆ.
ಕೊನಘಟ್ಟದ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಸ್ಕಾನ್ ಶ್ರೀ ನರಸಿಂಹ ಗಿರಿಧಾರಿ ಮಂದಿರದ ವತಿಯಿಂದ ಭಾನುವಾರ ಶ್ರೀ ಕೃಷ್ಷ ಜನ್ಮಾಷ್ಠಮಿ ಆಚರಿಸಲಾಯಿತು.
ಈ ವೇಳೆ ಶ್ರೀ ರಾಧಾ ಕೃಷ್ಣರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….