ಬೆಂಗಳೂರು, (ಆಗಸ್ಟ್.24): ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ? ಎಂದು ಉಪ ವಿಭಾಗಾಧಿಕಾರಿಗಳನ್ನು (ಎಸಿ) ಸಚಿವ ಕೃಷ್ಣ ಬೈರೇಗೌಡ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಎಸಿ ನ್ಯಾಯಾಲಯಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ತಕರಾರು ಪ್ರಕರಣ ಇತ್ಯರ್ಥಗೊಳಿಸದೆ ಬಾಕಿ ಉಳಿಸಿಕೊಂಡಿರುವ ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದ 30 ಉಪ-ವಿಭಾಧಿಕಾರಿಗಳು ಹಾಗೂ ವಲಯ ಆಯುಕ್ತರೊಂದಿಗೆ ವಿಡಿಯೊ ಕಾನ್ಸರೆನ್ಸ್ ಮೂಲಕ ಸಭೆ ನಡೆಸಿ ಅವರು ಮಾತನಾಡಿದರು.
ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಓಡಾಡಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿದೆ. ಬಾಕಿ ಇರುವ ಎಲ್ಲಾ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದ್ದರೂ, ಕಳೆದ ಮಾರ್ಚ್‌ನಿಂದ ವಿಲೇವಾರಿ ಕೆಲಸ ಮತ್ತೆ ನಿಂತ ನೀರಾಗಿದೆ ಎಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
36,430 ಪ್ರಕರಣ ಬಾಕಿ: ರಾಜ್ಯಾದ್ಯಂತ ಎಸಿ ನ್ಯಾಯಾಲಯಗಳಲ್ಲಿ ಒಟ್ಟಾರೆ 36,430 ಪ್ರಕರಣ ಬಾಕಿಯಿವೆ. ಈ ಪೈಕಿ ಅತ್ಯಧಿಕ ಬೆಂಗ ಳೂರು ಉತ್ತರ ವಲಯದಲ್ಲಿ 5419 ಹಾಗೂ ಬೆಂ.ದಕ್ಷಿಣ ವಲಯ ದಲ್ಲಿ 4351 ಪ್ರಕರಣ ಬಾಕಿ ಇವೆ. ಅಲ್ಲದೆ, ಈ ಎರಡೂ ವಿಭಾಗ ದಲ್ಲಿ ಅಧಿಕಾರಿಗಳು ಶೇ.65ಕ್ಕಿಂತ ಹೆಚ್ಚು ತನ್ನ ಕಾರ್ಯಕ್ಷೇತ್ರದ (ಜ್ಯೂರಿ ಸೆಕ್ಷನ್) ಹೊರಗಿನ ಪ್ರಕರಣಗಳನ್ನೂ ದಾಖಲಿಸಿಕೊಂಡಿ ದ್ದಾರೆ. ಪ್ರಕರಣ ಇತ್ಯರ್ಥವೂ ಆಮೆ ಗತಿಯಲ್ಲಿ ಸಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತೀವ್ರ ತರಾಟೆ ತೆಗೆದುಕೊಂಡರು.
ಅಧಿಕಾರಿಗಳಿಗೆ ನೋಟಿಸ್ ಜಾರಿ: ಇನ್ನೂ ತುಮಕೂರು ಜಿಲ್ಲೆಯ ಎಸಿ ಕೋರ್ಟ್‌ನಲ್ಲಿ ಕಳೆದ ಮಾರ್ಚ್‌ನಲ್ಲಿ 1373 ಪ್ರಕರಣ ದಾಖಲಾಗಿದ್ದರೆ, ಮಧುಗಿರಿಯಲ್ಲಿ 898 ಪ್ರಕರಣ ದಾಖಲಾಗಿದೆ. ಆದರೆ, ಇಷ್ಟೂ ಪ್ರಕರಣಗಳ ಪೈಕಿ ಕಳೆದ ಐದು ತಿಂಗಳಿನಿಂದ ಯಾವೊಂದು ಪ್ರಕರಣದಲ್ಲೂ ಮಧುಗಿರಿ ಉಪ-ವಿಭಾಗಾಧಿಕಾರಿ ಶಿವಪ್ಪ ಹಾಗೂ ತುಮಕೂರು ಉಪವಿಭಾಗಾಧಿಕಾರಿ ಗೌರವ್ ಶೆಟ್ಟಿ ಯಾವುದೇ ಕ್ರಮಜರುಗಿಸಿಲ್ಲ.
ಇವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಎಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾಗೆ ಸೂಚಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….