ಮಂಡ್ಯ, (ಆಗಸ್ಟ್ 22): ಮುಡಾ ಹಗರಣದಲ್ಲಿ ಕೇವಲ 14 ನಿವೇಶನ ಅಲ್ಲ, ಸಾವಿರಾರು ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಲೂಟಿ ಹೊಡೆದಿದ್ದಾರೆ. ಇದರ ಹಿಂದೆ ಇರುವ ದೊಡ್ಡ ತಿಮಿಂಗಿಲಗಳು ಹೊರಬರಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಮಂಡ್ಯದಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಸಿಲುಕಿದಾಗ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ನೆನಪಾಗುತ್ತದೆ. ಇವರು 14 ಸೈಟು ನುಂಗಿದ ಕೂಡಲೇ ಹಿಂಬಾಲಕರು ನೂರಾರು ಸೈಟುಗಳನ್ನು ನುಂಗಿದ್ದಾರೆ. ಇವರದ್ದೇ ಹಿಂಬಾಲಕರಾದ ಮರಿಗೌಡರೇ ಪತ್ರ ಬರೆದು ಅಕ್ರಮವಾಗಿದೆ ಎಂದು ಹೇಳಿದ್ದರು. ಅದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಟಿಐ ಮೂಲಕ ಹೊರತೆಗೆದಾಗ ಎಲ್ಲವೂ ಬಯಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಒಂದೂ ಸೈಟು ಅಕ್ರಮವಾಗಿ ಪಡೆದಿಲ್ಲ ಎಂದು ಹೇಳಿದ್ದಾರೆ ಎಂದರು.
ಈಗ ವೈಟ್‌ನರ್ ಅಕ್ರಮ ಬಯಲಾಗಿದೆ. ದಾಖಲೆಗಳಲ್ಲಿ ವೈಟ್‌ನರ್ ಹಾಕಿ ಕೆಲವು ಅಂಶಗಳನ್ನು ಮರೆಮಾಚಲಾಗಿದೆ. ಏನಾದರೂ ತಪ್ಪಾದಾಗ ಅದರ ಮೇಲೆ ಪೆನ್‌ನಲ್ಲಿ ಗೆರೆ ಎಳೆದರೆ ಸಾಕಿತ್ತು. ಆದರೆ ವಿಷಯವನ್ನು ಮುಚ್ಚಿಹಾಕಲು*ವೈಟ್‌ನರ್ ಬಳಸಿದ್ದಾರೆ. ವಿಜಯನಗರದಲ್ಲೇ ನಿವೇಶನ ಬೇಕು ಎಂದು ಸಿಎಂ ಪತ್ನಿ ಬರೆದಿದ್ದಾರೆ. ಅದಕ್ಕೆ ವೈಟ್‌ನರ್ ಹಚ್ಚಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಾಖಲೆ ತಿದ್ದಿದ್ದಾರೆ ಎಂದು ದೂರಿದರು.
ಜೈಲಿಗೆ ಹಾಕಿ ಎಂದಿಲ್ಲ: ರಾಜ್ಯಪಾಲರು ದೂರನ್ನು ಆಧರಿಸಿ ತನಿಖೆಗೆ ಅವಕಾಶ ನೀಡಿದ್ದಾರೆಯೇ ಹೊರತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಿಸಿಲ್ಲ. ತನಿಖೆ ಮಾಡಿ ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಬೋಧಿಸಿದ್ದೇ ರಾಜ್ಯಪಾಲರು. ಅಂತಹವರು ತನಿಖೆ ಮಾಡಿ ಎಂದಿದ್ದನ್ನು ವಿರೋಧಿಸಿದರೆ ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಅದು ತುಘಲಕ್ ದರ್ಬಾರ್ ಆಗುತ್ತದೆ. ಸಾಂವಿಧಾನಿಕವಾಗಿ ದೊಡ್ಡ ಹುದ್ದೆಯಲ್ಲಿರುವವರಿಗೆ ಕೀಳು ಮಾತುಗಳಿಂದ ನಿಂದಿಸುವುದು ಅಕ್ಷಮ್ಯ ಅಪರಾಧ. ಇದು ದಲಿತರಿಗೆ ಮಾಡುವ ಅಪಮಾನ. ಇದಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದರು.
ಬಿಜೆಪಿ ಸರ್ಕಾರ 40% ಕಮಿಶನ್ ಪಡೆದಿದೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡಿತ್ತು. ಅದಕ್ಕಾಗಿ ಪ್ರಕರಣ ದಾಖಲಿಸಿದ್ದು, ಅದರ ಜಾಮೀನಿನ ಮೇಲೆ ಕಾಂಗ್ರೆಸ್ ನಾಯಕರು ಹೊರಗೆ ಓಡಾಡುತ್ತಿದ್ದಾರೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….