ಒಂದು ದಿನ ಕೃಷ್ಣದೇವರಾಯನ ಆಸ್ಥಾನಕ್ಕೆ ಪಕ್ಷಿ ಹಿಡಿಯುವವನು ಬಂದನು. ಅವನ ಕೈಯಲ್ಲಿ ಒಂದು ಸುಂದರವಾದ ಬಣ್ಣ ಬಣ್ಣ ತುಂಬಿದ ಪಕ್ಷಿ ಇತ್ತು.
ಪ್ರಭು ಈ ಪಕ್ಷಿಯನ್ನು ನಿಮಗೋಸ್ಕರ ವಿಶೇಷವಾಗಿ ಹಿಡಿದು ತಂದಿದ್ದೇನೆ. ಇಂಥ ಅಪರೂಪದ ಪಕ್ಷಿ ಎಲ್ಲೂ ಸಿಗುವುದಿಲ್ಲ. ರಾಜ ಪಕ್ಷಿಯನ್ನು ನೋಡಿದ. ಹೌದು ನೀನು ಹೇಳಿದ ಹಾಗೆ ಇಂಥ ಮನಮೋಹಕವಾದ ಪಕ್ಷಿ ಯನ್ನು ನಾನು ಇದುವರೆಗೂ ನೋಡಿಲ್ಲ ಎಂದನು.
ಪಕ್ಷಿ ಹಿಡಿಯುವವನು ಪ್ರಭು ಇದಕ್ಕೆ ನವಿಲಿನ ಬಣ್ಣ ಇದೆ. ನವಿಲಿನ ರೀತಿಯಲ್ಲಿ ನೃತ್ಯ ಮಾಡುತ್ತದೆ. ಮತ್ತು ಇದು ಗಿಳಿಯ ರೀತಿ ಮುದ್ದು ಮುದ್ದಾಗಿ ಮಾತನಾಡುತ್ತದೆ. ಪಕ್ಷಿ ಕುರಿತು ಹೇಳಿದಷ್ಟು ರಾಜನಿಗೆ ಖುಷಿಯಾಗುತ್ತಿತ್ತು. ಏಕೆಂದರೆ ಕೃಷ್ಣದೇವರಾಯನಿಗೆ ಪ್ರಾಣಿಗಳು, ಪಕ್ಷಿಗಳು ಎಂದರೆ ತುಂಬಾ ಇಷ್ಟ.
ಅವನು ಅವುಗಳಿಗಾಗಿ ಸುಂದರವಾದ ದೊಡ್ಡ ಉದ್ಯಾನವನವನ್ನು ಮಾಡಿದ್ದನು. ಸುಂದರವಾದ ಪಕ್ಷಿಯನ್ನು ತನ್ನ ಉದ್ಯಾನವನದಲ್ಲಿ ಸೇರಿಸಬೇಕು ಎಂಬ ಆಸೆ ಅವನಿಗೆ ಬಂದಿತು.
ರಾಜನು ತನ್ನ ಕೋಶಾಧಿಕಾರಿಗಳನ್ನು ಕರೆದು ಈ ಬೇಟೆಗಾರನಿಗೆ 50 ಚಿನ್ನದ ವರಹಗಳನ್ನು ಕೊಟ್ಟು , ಅವನು ತಂದಿರುವ ಸುಂದರವಾದ ಪಕ್ಷಿಯನ್ನು ಅರಮನೆಯ ಉದ್ಯಾನವನದಲ್ಲಿ ಬಿಡಿ ಎಂದನು.
ರಾಜ ಹೇಳಿದಂತೆ 50 ಚಿನ್ನದ ವರಹಗಳನ್ನು ತೆಗೆದುಕೊಂಡು ಹೋಗಿಬಿಡಬೇಕು ಎಂದು ಪಕ್ಷಿ ಹಿಡಿಯುವವನು ತುದಿಗಾಲಲ್ಲಿ ನಿಂತಿದ್ದ.
ಆ ವೇಳೆಗೆ ತೆನಾಲಿ ರಾಮಕೃಷ್ಣ ಕೂತಲ್ಲಿಂದ ಎದ್ದನು. ಮತ್ತು ರಾಜನಿಗೆ ಹೇಳಿದನು ಪ್ರಭುಗಳೇ, ನನಗೆ ಅನ್ನಿಸುವ ರೀತಿ ಈ ಪಕ್ಷಿಗೆ ಮಳೆಯಲ್ಲಿ ನವಿಲಿನಂತೆ ಕುಣಿಯುವ ಶಕ್ತಿ ಇಲ್ಲ ಎನಿಸುತ್ತಿದೆ. ಇದನ್ನು ಕೇಳಿದ ಬೇಡರವನು ನೀವು ಏನು ಹೇಳುತ್ತಿರುವಿರಿ, ಅದು ಹಾಗೆ ಅಂತ ಹೇಗೆ ಹೇಳುವಿರಿ? ಎಂದು ಕೇಳಿದ.
ಅದಕ್ಕೆ ತೆನಾಲಿ ರಾಮನು, ನೋಡು ನೀನು ಈ ಪಕ್ಷಿಗೆ ಒಂದು ದಿನವಾದರೂ ನೀರಿನಿಂದ ಮೈ ತೊಳೆದಿದ್ದೀಯಾ? ನನಗೇನೋ ನೋಡಿದರೆ ನೀನು ಎಂದೂ ಇದಕ್ಕೆ ಸ್ನಾನ ಮಾಡಿಸಿಲ್ಲ ಅಂತ ಅನಿಸುತ್ತಿದೆ ಎಂದನು.
ಬೇಟೆಗಾರನಿಗೆ ತೆನಾಲಿ ರಾಮಕೃಷ್ಣನ ಪ್ರಶ್ನೆ ಕೇಳಿ, ಅವನಿಗೆ ಹೆದರಿಕೆ ಶುರುವಾಗಿ ಮುಖದಲ್ಲಿ ಬೆವರೊಡೆಯಿತು. ನೀವು ನೀವು ಏನು ಹೇಳುತ್ತಾ ಇದ್ದೀರಿ? ಎಂದು ಸ್ವಲ್ಪ ನಡುಗುವ ಧ್ವನಿಯಿಂದ ಹೇಳಿದ.
ತೆನಾಲಿ ರಾಮ ಅವನಿಗೆ ಹೇಳಿದನು ಸ್ವಲ್ಪ ತಡಿ, ನೋಡ್ತಾ ಇರು ನಿನಗೆ ಗೊತ್ತಾಗುತ್ತೆ ಎಂದವನೇ, ಒಳಗೆ ಹೋಗಿ ಒಂದು ತಂಬಿಗೆ ತುಂಬಾ ನೀರು ತಂದನು. ಕ್ಷಣವು ತಡ ಮಾಡದೆ ಆ ಬಣ್ಣದ ಪಕ್ಷಿಯ ಮೇಲೆ ನೀರನ್ನು ಎರಚಿದನು…!
ನೀರು ಎರಚಿದ ರಬಸಕ್ಕೆ ಗಾಬರಿಯಿಂದ ಬಣ್ಣದ ಪಕ್ಷಿ ಅಲ್ಲಿಂದ ತಪ್ಪಿಸಿಕೊಳ್ಳಲು ಎಗರಾಡುತ್ತಿತ್ತು. ಆಗ ಅದರ ಮೈಮೇಲಿದ್ದ ಬಣ್ಣವೆಲ್ಲ ತೊಳೆದು ಹೋಯಿತು.
ಆ ಸ್ಥಿತಿಯಲ್ಲಿ ಪಕ್ಷಿಯನ್ನು ನೋಡಿದಾಗ ಅದು ಸಾಧಾರಣ ಪಕ್ಷಿ ಎಂದು ಎಲ್ಲರಿಗೂ ತಿಳಿಯಿತು. ರಾಜನು ನೋಡಿದ ಇದು ಬಣ್ಣ ಹಚ್ಚಿದ ಪಕ್ಷಿ ಎಂದು ಉದ್ಗಾರ ತೆಗೆದು, ಇದಕ್ಕೆ ಬಣ್ಣ ಹಚ್ಚಿಕೊಂಡು ಬಂದಿದ್ದೀಯ ಎಂದು ಬೇಟೆಗಾರನನ್ನು ಕೇಳಿದ.
ಆಗ ತೆನಾಲಿ ರಾಮ ಹೇಳಿದ ಇದು ಸಾಧಾರಣ ಪಾರಿವಾಳ, ಇದಕ್ಕೆ ಈ ಬೇಟೆಗಾರ ಬಣ್ಣವನ್ನು ಬಳಿದಿದ್ದಾನೆ. ರಾಜನಿಗೆ ಇನ್ನೂ ಆಶ್ಚರ್ಯವಾಗಿ ತೆನಾಲಿ ರಾಮನನ್ನು ಕೇಳಿದನು. ಸಾಧಾರಣ ಪಾರಿವಾಳ ಪಕ್ಷಿಗೆ ಬಣ್ಣ ಹಚ್ಚಿದೆ ಎಂದು ನಿನಗೆ ಹೇಗೆ ತಿಳಿಯಿತು ಎಂದು ಕೇಳಿದಾಗ?
ಪ್ರಭು, ಬೇಟೆಗಾರನ ಕೈ ಬೆರಳಿನ ಉಗುರುಗಳನ್ನು ನೋಡಿ ಅದರಲ್ಲಿ ಬಣ್ಣ ಹಿಡಿದಿದೆ. ಅಲ್ಲದೆ ಪಾರಿವಾಳಕ್ಕೆ ಹಚ್ಚಿದ ಎಲ್ಲಾ ಬಣ್ಣಗಳ ಕುರಿತು ಅವನ ಕೈ ಬೆರಳಿನಲ್ಲಿ ಗುರುತು ಇರುವುದನ್ನು ನೋಡಿದೆ. ಇದರಿಂದ ನನಗೆ ಅನುಮಾನ ಬಂದಿತು.
ಕೃಷ್ಣದೇವರಾಯನು ಬೇಟೆಗಾರನ ಕೈ ಬೆರಳುಗಳ ಕಡೆ ನೋಡಿದನು. ಇನ್ನು ಆ ಬಣ್ಣ ಹಾಗೆ ಇರುವುದನ್ನು ನೋಡಿದ. ಬೇಟೆಗಾರ ಮಾಡಿದ ಮೋಸ ರಾಜನಿಗೆ ಸಾಕ್ಷಿ ಸಮೇತ ಸಿಕ್ಕಿತು.
ಬೇಟೆಗಾರನಿಗೂ ಗೊತ್ತಾಗಿ ಅವನು ಅಲ್ಲಿಂದ ತಪ್ಪಿಸಿಕೊಳ್ಳಲು ಓಡಲು ಹೊರಟನು. ರಾಜನ ಅಗ್ಙೆಯಂತೆ ಅರಮನೆಯ ಕಾವಲುಭಟರು ಅವನನ್ನು ಹಿಡಿದು ಸೆರೆಮನೆಗೆ ತಳ್ಳಿದರು.
ಕೃಷ್ಣ ದೇವರಾಯನಿಗೆ, ತೆನಾಲಿ ರಾಮನ ಮೇಲೆ ಮತ್ತಷ್ಟು ಅಭಿಮಾನ ಹೆಚ್ಚಿತು ಏಕೆಂದರೆ ಒಬ್ಬ ಸಣ್ಣ ಬೇಟೆಗಾರ ಮಾಡಿದ ಮೋಸವನ್ನು ಕಂಡುಹಿಡಿದನು.
ರಾಜನು ಬೇಟೆಗಾರನಿಗೆ ಕೊಡಲು ಹೊರಟಿದ್ದ ಇವತ್ತು ಚಿನ್ನದ ವರಹಗಳನ್ನು ತೆನಾಲಿ ರಾಮಕೃಷ್ಣನಿಗೆ ಬಹುಮಾನವಾಗಿ ಕೊಟ್ಟನು.
ಬರಹ: ಆಶಾ ನಾಗಭೂಷಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….