ರಾಯಚೂರು, (ಆಗಸ್ಟ್.20): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಶ್ರೀಮಠದಲ್ಲಿ ಅದ್ಧೂರಿ ಚಾಲನೆ ದೊರೆಯಿತು.
ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ರಾಯರ ಬೃಂದಾವನ ಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಚಾಲಮ್ಮಗೆ ನಮಿಸಿ ಪ್ರಾಕಾರದ ಮುಖ್ಯದ್ವಾರದ ಮುಂದೆ ಸಕಲ ಧಾರ್ಮಿಕ ವಿಧಿ ವಿಧಾನದ ಮೂಲಕ ಗೋಪೂಜೆ, ಅಶ್ವಪೂಜೆ, ಒಂಟೆಗಳ ಪೂಜೆ ನೆರವೇರಿಸಿ ಭಗವಾ ಧ್ವಜಾರೋಹಣ ನೆರವೇರಿಸಿ ಸಪ್ತರಾತ್ರೋತ್ಸವಕ್ಕೆ ಮುನ್ನುಡಿ ಹಾಕಿದರು.
ಬಳಿಕ ವೇದಿಕೆ ಸಭಾ ಭವನದಲ್ಲಿ ರಾಯರ ಪ್ರತಿಮೆಗೆ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಶ್ರೀಗಳು ವಿವಿಧ ಸೇವಾ ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿ ರಾಯರ ಭಕ್ತರಿಗೆ ತೊಂದರೆಯಾ ಗದಂತೆ ಸೇವೆ ಸಲ್ಲಿಸುವಂತೆ ಆಶೀರ್ವದಿಸಿದರು.
ಈಗಾಗಲೇ ಮಠದಲ್ಲಿ ಸೇವೆ ಕೈಗೊಳ್ಳಲು ನೂರಾರು ಸ್ವಯಂ ಸೇವಕರ ಭಕ್ತರ ದಂಡು ಸಹ ಆಗಮಿಸಿದ್ದು ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ನಿನಾದದ ನಡುವೆ ವೇದ ಮಂತ್ರಗಳೊಂದಿಗೆ ಚಂಡೆ ಮದ್ದಳೆ ಸೇರಿದಂತೆ ಮಂಗಳ ವಾದ್ಯಗಳ ನಿನಾದದಲ್ಲಿ ಚಿನ್ನ, ಬೆಳ್ಳಿ, ನವರತ್ನ ಖಚಿತ ರಥಗಳನ್ನು ಶೃಂಗರಿಸಿ ಸಿದ್ದಪಡಿಸಿ ಪ್ರಹ್ಲಾದ ರಾಜರ ಉತ್ಸವಕ್ಕೆ ಸಕಲ ಸಿದ್ದತೆ ಪೂರ್ಣಗೊಳಿಸಲಾಗಿದೆ.
ನಂತರ ಪ್ರಹ್ಲಾದರಾಜರ ಪಲ್ಲಕ್ಕಿ ಉತ್ಸವ ಮತ್ತು ಧಾನ್ಯ ಪೂಜೆ ನಡೆಯಿತು. ಇದಾದ ಬಳಿಕ ಬೃಂದಾವನದ ಪ್ರಾಂಗಣದಲ್ಲಿ ಪ್ರಹ್ಲಾದರಾಯರ ಚಿನ್ನದ ರಥೋತ್ಸವ ಜರುಗಿತು. ಮಠದ ಮುಂಭಾಗದ ಲ್ಲಿರುವ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರ ಗಳಲ್ಲಿ ದಾಸವಾಣಿ, ನೃತ್ಯ ರೂಪಕಗಳು ಜರುಗಿದವು.
ಬೇಗನೇ ಬಂದ ಶೇಷ ವಸ್ತ್ರ: ಭಾನುವಾರ ತಿರುಪತಿ ತಿರುಮಲ ದೇವಸ್ಥಾನದಿಂದ ರಾಯರ ಬೃಂದಾವನಕ್ಕೆ ಮಧ್ಯಾರಾಧನೆಯ ದಿನ ಅಲಂಕರಿಸಲು ಬಂದ ಶೇಷ ವಸ್ತ್ರವನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಿದ್ದು ಈ ಬಾರಿ ವಿಶೇಷವಾಗಿತ್ತು.
ಪ್ರತಿವರ್ಷ ಮಧ್ಯಾರಾಧನೆ ದಿನ ಬೆಳಿಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ಆಗಮಿಸುವ ಶೇಷ ವಸ್ತ್ರ ಈ ಬಾರಿ ಮುಂಚೆಯೇ ಆಗಮಿಸಿದ್ದಕ್ಕೆ ಯಾವುದೇ ವಿಶೇಷ ಕಾರಣವಿಲ್ಲ. ಮಧ್ಯಾರಾಧನೆ ದಿನ ಹೆಚ್ಚಿನ ಕೆಲಸಗಳು ಮತ್ತು ನೂಕುನುಗ್ಗಲು ಇರುವುದರಿಂದ ಮುಂಚೆಯೇ ಶೇಷ ವಸ್ತ್ರವನ್ನು ಟಿಟಿಡಿ ಕಳುಹಿಸಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….