ದೊಡ್ಡಬಳ್ಳಾಪುರ, (ಆಗಸ್ಟ್.19); ನಗರದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗಳ ಕಾಲ ಸುರಿದ ಸತತ ಮಳೆಯಿಂದಾಗಿ ನಗರದ ಹಲವಾರು ಕಡೆ ಚರಂಡಿಗಳು ಉಕ್ಕಿ ಹರಿದು ರಸ್ತೆಯಲ್ಲಾ ಜಲಾವೃತವಾಗಿ ನಾಗರಿಕರು ಹಿಡಿ ಶಾಪ ಹಾಕುವಂತಾಗಿತ್ತು.
ನಗರದ ತೇರಿನ ಬೀದಿ ಅರಳು ಮಲ್ಲಿಗೆ ಬಾಗಿಲು ನೆಲಮಂಗಲ ರಸ್ತೆಯಲ್ಲಿ ಮಳೆಯಿಂದಾಗಿ ಚರಂಡಿಗಳಲ್ಲಿನ ಕೊಳಚೆ ನೀರು ರಸ್ತೆಗೆ ಹರಿದು, ವಾಹನ ಸಂಚಾರರು ಪರದಾಡುವಂತಾಗಿತ್ತು.
ನಗರದ ತೇರಿನ ಬೀದಿ ಬಳಿಯ ರಸ್ತೆಯ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ನಿಂತಿತ್ತು. ಇಲ್ಲಿನ ರಾಜಕಾಲುವೆಯಲ್ಲಿ ನೀರು ತುಂಬಿದ್ದು, ಪ್ರಾಣಾಪಾಯದ ಆತಂಕ ಎದುರಾಗಿದೆ.
ವಿಶ್ವೇಶ್ವರಯ್ಯ ವೃತ್ತದ ಬಳಿ ಇರುವ ಅರಳು ಮಲ್ಲಿಗೆ ಬಾಗಿಲು ಸರ್ಕಾರಿ ಶಾಲೆಯ ಮೈದಾನ ಪೂರ್ತಿ ಜಲಾವೃತವಾಗಿದ್ದು, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಕೆಸರಿನಲ್ಲಿಯೇ ನಡೆಯುವಂತಾಗಿತ್ತು. ಶಾಲೆಗೆ ಹೊಂದಿಕೊಂಡಿರುವ ರಾಜ ಕಾಲುವೆ ಕಿರಿದಾಗಿದ್ದು, ಇದರಲ್ಲಿ ಕಸ ಕಡ್ಡಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ಶಾಲೆಯ ಮೈದಾನಕ್ಕೆ ಬರುತ್ತದೆ. ಅಲ್ಲದೇ ಹಿಂದೆ ಚೈತನ್ಯ ನಗರದ ರಸ್ತೆಯಲ್ಲಿಯ ಚರಂಡಿಗಳಲ್ಲಿಯೂ ಸಹ ಇದೇ ಸಮಸ್ಯೆಯಾಗಿದ್ದು, ಮಳೆ ಬಂದರೆ ಜನರು ಕೆಸರು ನೀರಿನಲ್ಲಿ ಓಡಾಡಬೇಕಿದೆ. ಬಗ್ಗೆ ಜನಪ್ರತಿನಿಗಳಾಗಲೀ, ನಗರಸಭೆ ಅಧಿಕಾರಿಗಳಾಗಲೀ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಇನ್ನು ನಗರದ ಗಾಂಧಿ ವೃತ್ತದಿಂದ ಡಿಕ್ರಾಸ್‍ಗೆ ಸಾಗುವ ರಸ್ತೆಯಲ್ಲಿ ಮಳೆ ನೀರು ಚರಂಡಿಗೆ ಸಾಗದೆ ರಸ್ತೆಯಲ್ಲಿಯೇ ನಿಂತು ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ತೇರಿನ ಬೀದಿ ರಾಜಕಾಲುವೆ ತುಂಬಿ ರಸ್ತೆಗೆ ತ್ಯಾಜ್ಯ ನೀರು ಹರಿದರೆ, ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್‍ನಲ್ಲಿ ನೀರು ನಿಲ್ಲುತ್ತಿದೆ, ಕುಚ್ಚಪ್ಪನ ಪೇಟೆ, ಸಂಜಯನಗರ, ರಂಗಪ್ಪ ಸರ್ಕಲï, ತಾಲೂಕು ಕಚೇರಿ ಮುಂಭಾಗದ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಒಳಚರಂಡಿ ನೀರು ತುಂಬಿ ರಸ್ತೆ ಹರಿಯುವ ಕಾರಣ ನಗರವಾಸಿಗಳು ತೀವ್ರ ತೊಂದರೆ ಎದುರಿಸುವಂತಾಗಿತ್ತು.
ಎರಡು ತಿಂಗಳ ಹಿಂದೆ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ. ಚರಂಡಿಗಳಲ್ಲಿ, ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಡ್ಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದಿರುವುದು, ಒಳಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ಇರುವುದು ಸಹ ಇದಕ್ಕೆ ಕಾರಣವಾಗಿದೆ.
ಇನ್ನು ತಗ್ಗು ಪ್ರದೇಶದಲ್ಲಿರುವ ಕಾಲೋನಿಗಳಲ್ಲಿ ಮಳೆ ನೀರು ಮನೆಗಳಿಗೇ ಹರಿದಿವೆ. ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ನಗರಸಭೆ ಅಧಿಕಾರಿಗಳು ಕೈಗೊಳ್ಳದ ಕಾರಣ ನಗರದ ಜನತೆ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅಧೀಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….