ರಾಯಚೂರು, (ಆಗಸ್ಟ್.19): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಯರ 353ನೇ ಆರಾಧನೆ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಭಾನುವಾರ ರಾತ್ರಿ ಚಾಲನೆ ನೀಡಿದರು.
ಗೋವು, ಅಶ್ವ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿ ಏಳು ದಿನಗಳ ಸಪ್ತ ರಾತ್ರೋತ್ಸವ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿ ನಂತರ ಯೋಗಿಂದ್ರ ಸಭಾ ಮಂಟಪದಲ್ಲಿ ಶ್ರೀಗಳು ಭಕ್ತರಿಗಾಗಿ ಆಶೀರ್ವಚನ ನೀಡಿದರು, ಕಲಿಯುಗದ ಕಾಮದೇನು, ಕಲ್ಪವೃಕ್ಷರಾದ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸದ ನಿಮಿತ್ತ ಸಪ್ತರಾತ್ರೋತ್ಸವ ಆರಂಭವಾಗಿದೆ.
ಈಗಾಗಲೇ ಗೋಪೂಜೆ, ಅಶ್ವಪೂಜೆ, ಧ್ವಜವಂದನೆ, ಧ್ಜಜಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ದೇಶ ಮತ್ತು ವಿದೇಶಗಳಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಗಳು, ಸನ್ನಿಧಾನಗಳಲ್ಲಿ ವೈಭವದಿಂದ ಆರಾಧನಾ ಮಹೋತ್ಸವ ಜರುಗಲಿದೆ ಎಂದರು.
ರಾಯರ ಆರಾಧನೆಗೆ ಗುರುರಾಯರ ಪೂರ್ಣ ಅನುಗ್ರಹವಿರಲಿದ್ದು, ಎಲ್ಲ ಭಕ್ತರಿಗೂ ಶ್ರೇಯಸ್ಸಾಗಲಿ ಮತ್ತು ಆರಾಧನೆ ಮಹೋತ್ಸವ ನಿರ್ವಿಘ್ನವಾಗಿ ಜರುಗಲಿ. ಮಂತ್ರಾಲಯ ಮಠಕ್ಕೆ ಬರುವ ಭಕ್ತರಿಗೆ ವಸತಿ, ಭೋಜನ, ಶೀಘ್ರ ದರ್ಶನ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸೇವೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಭಕ್ತರು ನಿರಾತಂಕವಾಗಿ ಮಠಕ್ಕೆ ಆಗಮಿಸಿ, ಸಪ್ತ ರಾತ್ರೋತ್ಸವ ಹಾಗೂ ಆರಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುರಾಯರ ದರ್ಶನ ಹಾಗೂ ಅನುಗ್ರಹವನ್ನು ಪಡೆಯಬೇಕು ಎಂದು ಶ್ರೀಗಳು ಅನುಗ್ರಹ ಸಂದೇಶ ನೀಡಿದರು.
ಇದಕ್ಕೂ ಮುಂಚೆ ರಾಯರ ಮೂಲ ಬೃಂದಾವನ ವಿಶೇಷ ಪೂಜೆ, ಶ್ರೀಗಳಿಂದ ಮೂಲ ರಾಮದೇವರ ಪೂಜೆ ನೆರವೇರಿಸಲಾಯಿತು.
ಐದು ರಥಗಳ ರಥೋತ್ಸವ ರಾಘವೇಂದ್ರ ಸ್ವಾಮಿಗಳ ಆರಾಧನೆ ನಿಮಿತ್ತ ರಾಯರ ಮಠದ ಪ್ರಾರಂಗಣದಲ್ಲಿ ಆರಾಧನೆ ಮೊದಲ ದಿನವಾದ ಭಾನುವಾರ ರಾತ್ರಿ ಶ್ರೀಮಠ ಪೀಠಾಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತ್ರತ್ವದಲ್ಲಿ ಗಜತ ವಾಹನೋತ್ಸವ, ರಥೋತ್ಸವ, ರಜತ ರಥೋತ್ಸವ, ಸುವರ್ಣ ರಥೋತ್ಸವ, ನವರತ್ನ ರಥೋತ್ಸವ ನೇರವೇರಿಸಿದರು. ಪಂಚಾ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿರುವುದು ವಿಶೇಷವಾಗಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….