ಬೆಂಗಳೂರು, (ಆ 17): ನಾನು ಮುಖ್ಯಮಂತ್ರಿಯಾಗಿ ಎರಡು ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಮುಖ್ಯಮಂತ್ರಿಗಳಿಗೆ “ನಮ್ಮ ಅಭಿನಂದನೆ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದು ನಿಮ್ಮೆಲ್ಲರ ಸರ್ಕಾರ. ಸರ್ಕಾರಿ ನೌಕರರ ಹಿತ ಕಾಯಲು ನಾನು ಮತ್ತು ನಮ್ಮ ಸಚಿವ ಸಂಪುಟ ಸದಾ ಸಿದ್ಧವಿದೆ ಎಂದರು.
ಸರ್ಕಾರ ಅಂದ್ರೆ ಎಲ್ಲಾ ಸರ್ಕಾರಿ ನೌಕರರೂ ಸೇರಿರ್ತಾರೆ. ನೀವೆಲ್ಲಾ ಒಟ್ಟು ಸೇರಿದರೆನೇ ಸರ್ಕಾರ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.
ಅಂಬೇಡ್ಕರ್, ಗಾಂಧಿ, ಬಸವಾದಿ ಶರಣರು ಸಮ ಸಮಾಜದ ಕನಸು ಕಂಡಿದ್ದರು. ಇವರೆಲ್ಲರ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲೂ ಇದೆ. ಇದಕ್ಕಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಸಮ ಸಮಾಜದ ಆಶಯದಿಂದ ಸರ್ಕಾರ ಜಾರಿ ಮಾಡುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ನಿಮ್ಮಗಳ ಮೇಲಿದೆ. ಶೋಷಿತ ಸಮುದಾಯಗಳ ಮನೆ ಬಾಗಿಲಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಿದಾಗ ಮಾತ್ರ ನಮ್ಮ ನಿಮ್ಮ ಶ್ರಮ ಸಾರ್ಥಕವಾಗುತ್ತದೆ. ಹೀಗೆ ನಾವು ನೀವು ಸೇರಿ ಸ್ವಾಸ್ಥ್ಯ ಸಮಾಜ ರೂಪಿಸಬೇಕಿದೆ ಎಂದರು.
ನಿಮ್ಮೆಲ್ಲರ ಬೇಡಿಕೆಯಂತೆ OPS ಮತ್ತು ಆರೋಗ್ಯ ಸಂಜೀವಿನಿ ಕಾರ್ಯಕ್ರಮದ ಬಗ್ಗೆಯೂ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ನಿಮ್ಮೆಲ್ಲರ ಸರ್ಕಾರ. ನಾನು ನಿಮ್ಮ ಜೊತೆ ಇರ್ತೇನೆ. ನಾವು-ನೀವು ಒಟ್ಟಾಗಿ ಜನರ ಜೊತೆ ಇದ್ದು, ಜನರ ಋಣ ತೀರಿಸೋಣ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಶಾಸಕರಾದ ಪ್ರಕಾಶ್ ರಾಥೋಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ರಾಜ್ಯ ಸರ್ಕಾರಿ ನೌಕರರ ಸಂಘದ ನಾನಾ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….