ಮುತ್ತುಕದಹಳ್ಳಿ ಎಂಬ ಊರಿನಲ್ಲಿ ಮುನಿಶಮಪ್ಪ ಮತ್ತು ಗಂಗಮ್ಮ ಎಂಬ ದಂಪತಿ ಇದ್ದರು. ಅವರಿಗೆ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನು ಇತ್ತು. ಆ ದಂಪತಿ ಆ ಸ್ವಲ್ಪ ಜಮೀನಿನಲ್ಲಿ ದುಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.
ಅವರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಒಂದು ದಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮುನಿಶಮಪ್ಪ ಬಾಳೆಯ ಸಸಿ ನೆಡಬೇಕೆಂದು ನೆಲವನ್ನು ಅಗೆಯುತ್ತಿದ್ದ. ‘ಟನ್’ ಎಂದು ಏನೋ ಶಬ್ದ ಬಂತು. ಆಗ ಮುನಿಶಮಪ್ಪನಿಗೆ ಅನುಮಾನ ಬಂತು ಏನೋ ಇರಬಹುದು ಎಂದು ಮತ್ತೆ ಅಗೆದನು. ಮತ್ತೆ ‘ಟನ್’ ಎಂದು ಮತ್ತು ದೊಡ್ಡ ಸದ್ದು ಬಂದು.
ಯಾವುದೋ ದೊಡ್ಡ ಕಲ್ಲಿರಬೇಕೆಂದು ಅದನ್ನು ತೆಗೆದುಹಾಕಬೇಕೆಂದು ಅದನ್ನು ತನ್ನ ಎರಡು ಕೈಗಳನ್ನು ಉಪಯೋಗಿಸಿ ಎಳೆದು ತೆಗೆದನು. ಅದು ತುಂಬಾ ಭಾರವಾಗಿತ್ತು. ಅದರಲ್ಲಿ ಏನಿರಬೇಕೆಂದು ಕುತೂಹಲ ಹುಟ್ಟಿತ್ತು. ಆದರೆ, ಮೇಲಿನ ಮಣ್ಣನ್ನೆಲ್ಲ ತೆಗೆದು ನೋಡಿದನು. ಕೊಪ್ಪರಿಗೆ ತುಂಬೆಲ್ಲಾ ಬಂಗಾರದ ನಾಣ್ಯಗಳು.
ಮುನಿಶಮಪ್ಪ ತುಂಬಾ ಖುಷಿಯಾಯಿತು. ಆದಷ್ಟು ದೇವತೆಯೇ ಒಲಿದು ಬಿಟ್ಟಿದ್ದಾಳೆ ಎನ್ನುತ್ತಾ ತನ್ನ ಹೆಂಡತಿ ಗಂಗಮ್ಮನನ್ನು ಕರೆದನು. ಗಂಗಮ್ಮನಿಗೆ ಚಿನ್ನವನ್ನು ನೋಡಿ ಮತ್ತಷ್ಟು ಖುಷಿಯಾಯಿತು. ಇಷ್ಟೊಂದು ಚಿನ್ನವನ್ನು ಅವಳು ತನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಆಕೆಗೆ ತನ್ನ ಕಣ್ಣನ್ನೇ ಒಮ್ಮೆ ನಂಬಲಾಗಲಿಲ್ಲ. ‘ರೀ. ಇವನ್ನೆಲ್ಲಾ ಕರಗಿಸಿ ಬೇರೆ ಬೇರೆ ರೀತಿಯ ಸರ, ಬಲೆ, ಸೊಂಟದ ಪಟ್ಟಿ, ಕೈಗೆ ವಂಕಿ, ಬಾಜುಬಂದಿ ಎಲ್ಲಾ ಮಾಡಿಸಿಕೊಂಡಿ’ ಎಂದಳು ಆಸೆಯಿಂದ.
ಲೇ, ಇದನ್ನ ಯಾರಿಗೂ ಹೇಳೋದು ಬೇಡ. ನಮ್ಮ ಹತ್ತಿರ ಇಷ್ಟೊಂದು ಬಂಗಾರವಿದೆ ಎಂದು ತಿಳಿದರೆ ಎಲ್ಲರ ಕಣ್ಣೂ ನಮ್ಮ ಮೇಲೆ ಇರುತ್ತದೆ. ಅಲ್ಲದೆ ನೋಡಿದ ಜನರಿಗೆಲ್ಲ ನಮ್ಮ ಬಗ್ಗೆ ಅನುಮಾನ ಕೂಡ ಬರುತ್ತದೆ ಎಂದನು ಮುನಿಶಮಪ್ಪ. ಗಂಗಮ್ಮ ಗಂಡ ಹೇಳುವುದು ಸರಿ ಎನಿಸಿತು.
‘ಹೋಗಲಿ ನಮ್ಮ ಮಗನಿಗಾದರೂ ಹೇಳೋಣ, ಅವನೂ ಖುಷಿ ಪಡಲಿ’ ಎಂದಳು. ಆಗ ಮುನಿಶಮಪ್ಪ, ‘ಲೇ ಗಂಗಮ್ಮ ಅವನಿಗೆ ಈ ಸುದ್ಧಿಯನ್ನು ಈಗಲೇ ಹೇಳುವುದು ಬೇಡ, ಅವನು ದೊಡ್ಡವನಾದ ಮೇಲೆ ಹೀಗೆ ಭೂಮಿಯನ್ನು ಅಗೆದಾಗ ಅವನಿಗೆ ನಿಧಿ ಸಿಗಬೇಕು. ಆಗ ಅವನಿಗೆ ಸಿಗುವ ಆನಂದವೇ ಬೇರೆ. ನನಗೆ ಸಿಕ್ಕ ಖುಷಿಯೇ ಆ ಆನಂದವೇ ಬೇರೆ. ನನಗೆ ಸಿಕ್ಕ ಖುಷಿಯೇ ಅವನಿಗೂ ಸಿಗಬೇಕು’ ಎಂದನು. ಗಂಗಮ್ಮ ಗಂಡನ ಮಾತಿಗೆ ಎದುರಾಡಲಿಲ್ಲ. ಬಂಗಾರದ ಕೊಪ್ಪರಿಗೆಯನ್ನು ಅಲ್ಲೇ ಇಟ್ಟು ಮಣ್ಣು ಮುಚ್ಚಿದರು.
ಕೆಲವು ವರ್ಷಗಳಲ್ಲೇ ಮುನಿಶಮಪ್ಪ ಮತ್ತು ಅವನ ಹೆಂಡತಿ ತೀರಿಕೊಂಡರು. ಮಗ ನಾರಾಯಣ ಕೊಪ್ಪರಿಗೆ ವಿಚಾರ ತಿಳಿದಿರಲಿಲ್ಲ. ಒಂದು ದಿನ ಹೀಗೆ ತೋಟದಲ್ಲಿ ಯಾವುದೋ ಸಸಿ ನೆಡಲು ಅಗೆಯುವಾಗ ಅದೇ ಬಂಗಾರ ತುಂಬಿದ ಕೊಪ್ಪರಿಗೆ ನಾರಾಯಣನಿಗೆ ಸಿಕ್ಕಿತು. ಅವನು ಸಹ ತಂದೆಯಂತೆ ಆಸೆಪಟ್ಟು ತನ್ನ ಹೆಂಡತಿಗೂ ತೋರಿಸದೆ ಹಾಗೆ ಮುಚ್ಚಿಟ್ಟನು. ಇವನ ಮಗ ನವೀನ ಚೆನ್ನಾಗಿ ಓದಿ ನಗರದಲ್ಲಿ ದೊಡ್ಡ ಕೆಲಸ ಹಿಡಿದುಕೊಂಡನು. ಒಂದು ದಿನ ನವೀನನ ಅಪ್ಪ ಅಮ್ಮ ಇಬ್ಬರೂ ಇದ್ದಕ್ಕಿದ್ದಂತೆ ತೀರಿಕೊಂಡರು.
ತನ್ನ ಜಮೀನಿನಲ್ಲಿ ಬಂಗಾರ ತುಂಬಿದ ಕೊಪ್ಪರಿಗೆ ಇದೆ ಎಂಬ ರಹಸ್ಯ ಅವನಿಗೆ ಗೊತ್ತೇ ಆಗಲಿಲ್ಲ. ಆತ ಒಂದು ದಿನ ತಾನು ಹೇಗಿದ್ದರೂ ನಗರದಲ್ಲಿ ಮನೆ ಮಾಡಿಕೊಂಡು ವಾಸಿಸುವುದು ಎಂದು ನಿರ್ಧರಿಸಿಯಾಗಿದೆ, ಇನ್ನೂ ಈ ಜಮೀನು ಮನೆ ಇಟ್ಟುಕೊಂಡು ಏನು ಮಾಡುವುದು. ಎಂದುಕೊಂಡು ತನ್ನ ಜಮೀನನ್ನು ಬೇರೊಬ್ಬರಿಗೆ ಮಾರಿಬಿಟ್ಟನು.
ಜಮೀನುದಾರರ ಮನೆಯಲ್ಲಿ ದ್ಯಾವಪ್ಪ ಎನ್ನುವ ಒಬ್ಬ ಬಡವ ಕೂಲಿ ಮಾಡುತ್ತಿದ್ದ. ಅವನು ತೋಟದಲ್ಲಿ ಕೆಲಸ ಮಾಡುವಾಗ ಆ ಕೊಪ್ಪರಿಗೆಯನ್ನು ನೋಡಿದ. ಆದರೆ, ಆತ ಆ ಕೊಪ್ಪರಿಗೆಯನ್ನು ತನ್ನ ಯಜಮಾನನಿಗೆ ಒಪ್ಪಿಸಿದ. ದ್ಯಾವಪ್ಪನ ಪ್ರಾಮಾಣಿಕತೆಗೆ ಮೆಚ್ಚಿದ ಆ ಜಮೀನುದಾರನು ಅದರಲ್ಲಿ ಅರ್ಥ ಭಾಗವನ್ನು ದ್ಯಾವಪ್ಪನಿಗೆ ಕೊಟ್ಟು ಉಳಿದ ಅರ್ಥ ಭಾಗವನ್ನು ಬಳಸಿಕೊಂಡನು. ಆಮೇಲೆ ಅವರೆಲ್ಲರೂ ಸುಖವಾಗಿ ಬದುಕು ಸಾಗಿಸಿದರು. ಬಚ್ಚಿಟ್ಟ ನಿಧಿ ಗೊತ್ತಿಲ್ಲದೆ ಬೇರೆಯವರ ಪಾಲಾಯಿತು.
ಕೃಪೆ: ಸೊಬಗು
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….