ಬೆಂಗಳೂರು, (ಆಗಸ್ಟ್.03): ಇನ್ನೂ ಹತ್ತು ವರ್ಷ ನಮ್ಮದೇ ಅಧಿಕಾರ, ಸರಕಾರ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಹತ್ತು ವರ್ಷದ ಮಾತಿರಲಿ, ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಬೆಂಗಳೂರಿನಿಂದ ಮೈಸೂರುವರೆಗೆ ಜೆಡಿಎಸ್ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.
ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡಿಕೊಳ್ಳುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ. ಈಗ ನೋಡಿದರೆ ಜೆಡಿಎಸ್ ಬಿಜೆಪಿ ಪಕ್ಷಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.
ಇದು ಅತ್ಯಂತ ಭ್ರಷ್ಟ, ಕೆಟ್ಟ ಸರಕಾರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡುವುದು ಬಿಟ್ಟು ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರದಲ್ಲಿ ನಿರತರಾಗಿದ್ದೀರಿ. ಹಿಂದೆಂದೂ ಕಂಡಿರದಂತಹ ಭ್ರಷ್ಟ ಸರಕಾರವನ್ನು ಕಾಣುತ್ತಿದ್ದೇವೆ ಎಂದು ಕೇಂದ್ರ ಸಚಿವರು ದೂರಿದರು.
ಈ ಕೆಟ್ಟ ಕಾಂಗ್ರೆಸ್ ಜನ ವಿರೋಧಿ ಸರಕಾರ ವಿರುದ್ಧ ನಾವು ಜಂಟಿ ಹೋರಾಟ ಹಮ್ಮಿಕೊಂಡಿದ್ದೇವೆ. ಜನರಿಗೆ ಇವರ ಆಕ್ರಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಆದಿಶಕ್ತಿ ತಾಯಿ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಯಡಿಯೂರಪ್ಪನವರ ಇನ್ನಿತರೆ ಮಾರ್ಗದರ್ಶಕರ ನೇತೃತ್ವದಲ್ಲಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ. ನಾಡಿನ ಜನತೆಯ ಅಭಿಪ್ರಾಯ ಏನಿದೆ ಅದರ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ಕಿಡಿಕಾರಿದರು.
ಡಿಕೆಶಿಯದ್ದು ನಾವು ಬಿಚ್ಚಿಡುತ್ತೇವೆ: ನಮ್ಮ ಪಾದಯಾತ್ರೆ ತಡೆಯಲು ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಾದ ಮೇಲೆ ಮುಂದೆಯೂ ಪ್ರಶ್ನೆ ಮಾಡುತ್ತಾರಂತೆ. ಮಾಡಲಿ.. ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ಅವರು ಕೇಳಿರುವ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ದೇವೆಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಈ ರಾಜ್ಯದ ಉಪ ಮುಖ್ಯಮಂತ್ರಿ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಕೊಡುತ್ತೇವೆ. ನಾವೂ ಕೂಡ ಅವರದ್ದು ಎಷ್ಟಿದೆ ಆಸ್ತಿ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಈ ಎಚ್ಚರಿಕೆ ನೀಡಿದರು.
ಅವರೇ ಹೇಳಿಕೊಂಡಿದ್ದಾರೆ.. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಆಸ್ತಿ, ಅಕ್ರಮಗಳ ದಾಖಲೆ ಪತ್ರಗಳನ್ನ ನಾನೇ ಕೇಂದ್ರ ಸರಕಾರಕ್ಕೆ ಕೊಟ್ಟಿದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮನ್ನು ಬಂಧಿಸಲು ದೆಹಲಿಯಿಂದ ಬರುತ್ತಾರೆ. ಬಂಧನಕ್ಕೂ ನಾವು ಸಿದ್ದವಿದ್ದೇವೆ ಅಂತ ಹೇಳಿಕೊಂಡಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.
ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿಯಿಂದ ಎನ್ನುತ್ತಾರೆ ಇವರು. ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ? ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ನನ್ನ ಪ್ರಶ್ನೆಗೆ ಪರಮೇಶ್ವರ್ ಉತ್ತರ ಕೊಡಲಿ: ಸಚಿವ ಡಾ.ಪರಮೇಶ್ವರ ಅವರು ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಆದರೆ, ಅವರು ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲಿ. ಯಾದಗಿರಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಸಮಾಜದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆ ಅವರು ಜೀವ ಕಳೆದುಕೊಂಡರು? ಬದುಕು ಕೊನೆ ಮಾಡಿಕೊಂಡ ಆ ಪೊಲೀಸ್ ಅಧಿಕಾರಿಯ ಪತ್ನಿ ಹೇಳ್ತಾರೆ, ಪೋಸ್ಟಿಂಗ್ ಗೆ 25 ಲಕ್ಷ ರೂಪಾಯಿ ಲಂಚ ಹಣ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ತಾಯಿ ಯಾರ ವಿರುದ್ಧ ಆರೋಪ ಮಾಡಿದ್ದಾರೆ? ಅದರ ಬಗ್ಗೆ ಪರಮೇಶ್ವರ ಅವರು ಉತ್ತರ ಕೊಡಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಸಾಮಾಜಿಕ ನ್ಯಾಯ ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆಯುವ ನೀವು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊಡುವ ಗೌರವ ಇದೇನಾ? 2012ರಲ್ಲಿ ನಿಮ್ಮ ಆಡಳಿತದ ಅವಧಿಯಲ್ಲಿ ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಮ್ಮದೇ ಸಮಾಜದ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ಅದು ಮುಂದುವರಿದೆ. ಇಂಥ ಸಾವುಗಳನ್ನು ತಡೆಯುವ ಶಕ್ತಿ ನಿಮಗೆ ಇಲ್ಲವೇ? ಎಂದು ಮುಖ್ಯಮಂತ್ರಿ ಅವರನ್ನು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.
ಸಿಎಂ ಮೇಲೆ ತೀವ್ರ ವಾಗ್ದಾಳಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕಿದೆ. ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವ್ಯಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ. ಮೂಡಾ ಹಗರಣದಲ್ಲಿ ನಿಮ್ಮ ಹೆಸರು ಬಂದಿದೆ. ನಿವು ನಿವೇಶನ ಪಡೆದಿರುವುದಕ್ಕೆ ನಮಗೆ ಅಭ್ಯಂತರ ಇಲ್ಲ. ಆದರೆ,ಸರ್ಕಾರದ ಜಮೀನು ನಿಮ್ಮ ಬಾಮೈದನ ಹೆಸರಿಗೆ ಖರೀದಿಸಿ, ಆ ನಂತರ ಸಹೋದರಿಗೆ ಕೊಡುತ್ತೀರಿ..! ಇದು ಹೇಗೆ ರವಾನೆಯಾಗಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಸಿದ್ದರಾಮಯ್ಯನವರೇ..? ಎಂದು ಕೇಂದ್ರ ಸಚಿವರು ರಾಜ್ಯದ ಮುಖ್ಯಮಂತ್ರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.
ಹಣ ಕೊಳ್ಳೆ ಹೊಡೆಯೋದು ಸಾಮಾಜಿಕ ನ್ಯಾಯವೇ?: ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಎಂದು ಮಾತು ಮಾತಿಗೂ ಹೇಳುತ್ತೀರಿ. ದಲಿತರ ಉದ್ಧಾರ ಎಂದು ಭಾಷಣ ಬಿಗಿಯುತ್ತೀರಿ. ಆದರೆ, ಅಂಬೇಡ್ಕರ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದೀರಿ. ಬಾಬಾ ಸಾಹೇಬ್ ಅವರಿಗೆ ಗೌರವ ಕೊಡೋದು ಎಂದರೆ, ಯಾರಿಗಾಗಿ ಅವರು ತಮ್ಮ ಬದುಕು ಮುಡಿಪಿಟ್ಟು ಹೋರಾಟ ನಡೆಸಿದರೋ ಆ ಜನಗಳ ಹಣ ಕೊಳ್ಳೆ ಹೊಡೆಯೋದಾ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ನಾನು, ಯಡಿಯೂರಪ್ಪನವರು ಸೇರಿ ವಾಲ್ಮೀಕಿ ನಿಗಮ ಸ್ಥಾಪನೆ ಮಾಡಿದೆವು. ದುರ್ಬಲರಿಗೆ ಶಕ್ತಿ ಬರಲಿ ಎನ್ನುವ ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದೆವು. ಈ ನಿಗಮದಲ್ಲಿ 89 ಕೋಟಿ ರೂ. ಅಕ್ರಮ ಆಗಿದೆ ಎಂದು ನೀವೇ ಹೇಳಿದ್ದೀರಿ. ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದೀರಿ. ನಿಮ್ಮ ನಿಜವಾದ ಬಣ್ಣ ಬಯಲಾಗತ್ತದೆ ಎಂದು ಹೆದರಿ ಕದ್ದು ಓಡಿದವರು ನೀವು. ಈಗ ನೋಡಿದರೆ ಮೂಡ ಹಗರಣ ಮುಚ್ಚಿಹಾಕಲು ಮುಂದಾಗಿದ್ದೀರಿ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ನನ್ನ ಬಣ್ಣ ಪರ್ಮನೆಂಟ್ ಪರಮೇಶ್ವರ್ ಅವರೇ: ಪರಮೇಶ್ವರ್ ಅವರು ಹೇಳುತ್ತಾರೆ, ನಾವು ಬಣ್ಣ ಬದಲಾಯಿಸಿದೇವೆ ಎಂದು. ನನ್ನ ಬಣ್ಣ ಬದಲಾಗಲು ಸಾಧ್ಯವೇ ಇಲ್ಲ ಪರಮೇಶ್ವರ್ ರವರೇ.. ಇದು ಪರ್ಮನೆಂಟ್ ಬಣ್ಣ.. ಎಂದು ತಮ್ಮ ಬಣ್ಣದ ಬಗ್ಗೆ ಮಾತನಾಡಿದ ಸಚಿವರಿಗೆ ಟಾಂಗ್ ಕೊಟ್ಟರು ಕೇಂದ್ರ ಸಚಿವರು.
ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಏಕವಚನದಲ್ಲಿ ಮಾತನಾಡುತ್ತಿರಿ ನೀವು. ನಾನು,ಸಿದ್ದರಾಮಯ್ಯ ನವರ ಪರವಾಗಿದ್ದೇನೆ ಎನ್ನುತ್ತೀರಿ. ನಿಮ್ಮ ನಾಟಕ ಬಯಲಾಗತ್ತದೆ, ಕಾದು ನೋಡಿ ಪರಮೇಶ್ವರ್ ಅವರೇ.. ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಸಿಡಿ ಶಿವು ಅವರು, ಕಾಂಗ್ರೆಸ್ ಎದುರಿಸಲು ಬಿಜೆಪಿ ಜತೆಗೆ ಜೆಡಿಎಸ್ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ನಿಮ್ಮನ್ನು ಬುಡ ಸಮೇತ ಕಿತ್ತೊಗೆಯಲು ನಾವು ಜೊತೆಯಾಗೆ ಇರುತ್ತೇವೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.
ಪಾದಯಾತ್ರೆಗೆ ಚಾಲನೆ: ಸಭೆಯ ನಂತರ ನಗಾರಿ ಭಾರಿಸುವ ಮೂಲಕ, ಕಹಳೆ ಮೊಳಗಿಸಿದ ನಂತರ ಎಲ್ಲಾ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಸೇರಿದಂತೆ ಎರಡೂ ಪಕ್ಷಗಳ ಸಂಸದರು, ನಾಯಕರು, ಕಾರ್ಯಕರ್ತರು ಹಾಗೂ ಅಸಂಖ್ಯಾತ ಜನರು ಪಾಲ್ಗೊಂಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….