ದೊಡ್ಡಬಳ್ಳಾಪುರ, (ಜುಲೈ.23); ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯದೇ ಕನ್ನಡಿಗರಿಗೆ ಉದ್ಯೋಗ ನೀಡುವ ಮಸೂದೆಯನ್ನು ಜಾರಿ ಮಾಡಬೇಕು ಎಂದು ಕನ್ನಡ ಪಕ್ಷದ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಪಕ್ಷದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್‍ಯದರ್ಶಿ ಡಿ.ಪಿ.ಆಂಜನೇಯ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರ 60ರ ದಶಕದಿಂದಲೂ ಚರ್ಚೆಯಾUಗುತ್ತಲೇ ಇದೆ. 50 ವರ್ಷಗಳಿಂದಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಬಂದಂತಹ ಎ ಸರ್ಕಾರಗಳು ಕನ್ನಡಿಗರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ.
ಈ ದಿಸೆಯಲ್ಲಿ ರೂಪುಗೊಂಡಿರುವ ಡಾ.ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಬೇಕಿದೆ. ಇತ್ತೀಚೆಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಜಾರಿಗೆ ತರುವ ಘೋಷಣೆ ಮಾಡಿದ್ದರು. ಆದರೆ ಕೆಲ ಉದ್ಯಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಮಸೂದೆ ನೆನೆಗುದಿಗೆ ಬಿದ್ದಿದೆ.
ಇಲ್ಲಿನ ನೆಲ, ಜಲ ಸವಲತ್ತುಗಳನ್ನು ಬಳಸಿಕೊಂಡು ಸ್ಥಳೀಯ ಕನ್ನಡಿಗರಿಗೆ ಕೆಲಸ ನೀಡುವುದಿಲ್ಲ ಎನ್ನುವ ಉದ್ಘಟತನದ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ಇಂದು ನೂರಾರು ವಿಶ್ವಿವಿದ್ಯಾನಿಲಯಗಳಲ್ಲಿ ಲಕ್ಷಾಂತರ ಮಂದಿ ಪದವಿಪಡೆದು ಹೊರಬರುತ್ತಿದ್ದಾರೆ.
ಉದ್ಯೋಗಗಳ ಅವಕಾಶಗಳು ಹೆಚ್ಚಾಗುತ್ತಿದ್ದರೂ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಈ ಐಟಿ-ಬಿಟಿ ಕಂಪನಿಗಳು ಕರ್ನಾಟಕದಿಂದ ಹೊರಹೋಗಬೇಕು. ಆದರೆ ನುಡಿದಂತೆ ನಡೆಯುತ್ತೇವೆಂದು ಹೇಳುವ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾದ ನಿಲುವನ್ನ ಪ್ರಕಟಿಸಬೇಕು ಮತ್ತು ಅದು ಶಾಸನವಾಗಬೇಕು ಇದೀಗ ನಡೆಯುತ್ತಿರುವ ವಿಧಾನಮಂಡಲದ ಅವೇಶನದಲ್ಲಿ ಈ ವಿಚಾರವನ್ನು ತಾವು ಮಂಡಿಸಿ ಕನ್ನಡಿಗರಿಗೆ ಇದುವರೆಗೂ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರ ಬಹುದಿನದ ಬೇಡಿಕೆ ಈಡೇರಿಕೆಗೆ ಕನ್ನಡ ಪಕ್ಷ ಒತ್ತಾಯಿಸುತ್ತದೆ.
ಸರೋಜಿನಿ ಮಹಿಸಿ ವರದಿ ಅನ್ವಯ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲೂ ಸಹ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಕನ್ನಡ ಪಕ್ಷ ಒತ್ತಾಯಿಸುತ್ತದೆ ಎಂದರು.
ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್.ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡದೇ ವಂಚಿಸುತ್ತಲೇ ಬಂದಿವೆ. ಡಿ.ದರ್ಜೆಯ ಉದ್ಯೋಗಗಳೂ ಸಹ ಪರರ ಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ಕನ್ನಡಿಗರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ನಮ್ಮ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್.ರಮೇಶ್, ಉಪಾಧ್ಯಕ್ಷ ಜಿ.ರಾಮು, ಕನ್ನಡ ಪಕ್ಷದ ತಾಲೂಕು ಉಪಾಧ್ಯಕ್ಷ ಗುರು ಮೂರ್ತಿ, ಪ್ರಧಾನ ಕಾರ್‍ಯದರ್ಶಿ ಬೋರೇಗೌಡ, ಮುಖಂಡರಾದ ಮೋಹನ್ ಕುಮಾರ್, ಮುನಿರಾಜು, ಉಮಾಶಂಕರ್, ಸೂರ್‍ಯನಾರಾಯಣ್, ಸಿದ್ದರಾಜು, ಮಂಜುನಾಥ, ನರಸಿಂಹಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….