ದೊಡ್ಡಬಳ್ಳಾಪುರ, (ಜುಲೈ.16): ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರಾಗಿ,ಮುಸುಕಿನಜೋಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಆದರೆ ಬಿತ್ತನೆಗೆ ಅಗತ್ಯ ಇರುವ ಡಿಎಪಿ ರಸಗೊಬ್ಬರ ದೊರೆಯದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
‘ಅತಿ ಹೆಚ್ಚು ರಸಗೊಬ್ಬರ ಮಾರಾಟ ಮಾಡುವ ನಗರದ ಟಿಎಪಿಎಂಸಿಎಸ್ ಸೇರಿದಂತೆ ಯಾವುದೇ ರಸಗೊಬ್ಬರ ಮಾರಾಟಗಾರರ ಬಳಿಯು ಡಿಎಪಿ ರಸಗೊಬ್ಬರ ದಾಸ್ತಾನು ಇಲ್ಲದಾಗಿದೆ. ಸಾಮಾನ್ಯವಾಗಿ ರಾಗಿ ಬಿತ್ತನೆ ಸಂದರ್ಭದಲ್ಲಿ ಬಹುತೇಕ ಎಲ್ಲಾ ರೈತರು ಮೂಲ ಗೊಬ್ಬರವಾಗಿ ಡಿಎಪಿ ರಸಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಾರೆ.
ಈ ವಾಸ್ತವ ತಿಳಿದು ಸಹ ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ರಸಗೊಬ್ಬರ ರೈತರಿಗೆ ದೊರೆಯುವಂತೆ ಮಾಡಬೇಕು. ಮಳೆ ಬೀಳುವ ಸಮಯದಲ್ಲಿ ಬಿತ್ತನೆ ಮಾಡದೇ ರಸಗೊಬ್ಬರ ದೊರೆತಾಗ ಬಿತ್ತನೆ ಮಾಡಲು ಸಾಧ್ಯವೇ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮುತ್ತೇಗೌಡ ಪ್ರಶ್ನೆ ಮಾಡಿದ್ದಾರೆ.
ಇತರೆ ರಸಗೊಬ್ಬರಗಳಿಗೆ ಹೋಲಿಕೆ ಮಾಡಿದರೆ ಡಿಎಪಿ ರಸಗೊಬ್ಬರಕ್ಕೆ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡಬೇಕಿದೆ. ಹಾಗಾಗಿಯೇ ಡಿಎಪಿ ರಸಗೊಬ್ಬರ ಸರಬರಾಜು ಕಡಿಮೆ ಮಾಡಿದೆ. ರೈತರಿಗೆ ಅಗತ್ಯ ಗೊಬ್ಬರ ದೊರೆತರೆ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಸರ್ಕಾರ ತಕ್ಷಣ ರೈತರಿಗೆ ಅಗತ್ಯ ಇರುವಷ್ಟು ಡಿಎಪಿ ರಸಗೊಬ್ಬರ ಸರಬರಾಜು ಮಾಡಬೇಕು ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
‘ನಾವು ಮುಂಗಡವಾಗಿಯೇ ಹಣ ಪಾವತಿಸಲು ಸಿದ್ದ.ಆದರೆ ರಸಗೊಬ್ಬರವೇ ಸರಬರಾಜು ಮಾಡುತ್ತಿಲ್ಲ. ಬಿತ್ತನೆ ಸಮಯದಲ್ಲಿ ಹೆಚ್ಚಾಗಿ ರೈತರು ಖರೀದಿ ಮಾಡುವುದೇ ಡಿಎಪಿ. ಆದರೆ ಇತರೆ ರಸಗೊಬ್ಬರಗಳನ್ನು ಖರೀದಿ ಮಾಡಿದರೆ ಮಾತ್ರ ಡಿಎಪಿ ನೀಡುತ್ತೇವೆ ಎಂದು ರಸಗೊಬ್ಬರ ಕಂಪನಿಗಳು ನಮಗೆ ಷರತ್ತು ವಿಧಿಸುತ್ತಾರೆ. ರೈತರಿಗೆ ನಾವು ಈ ಷರತ್ತು ವಿಧಿಸುತ್ತ ಇತರೆ ರಸಗೊಬ್ಬರಗಳನ್ನು ಖರೀದಿ ಮಾಡುವಂತೆ ಹೇಳಲು ಹೋದರೆ ಪ್ರತಿಭಟನೆ ನಡೆಸುತ್ತಾರೆ. ಹಾಗಾಗಿಯೇ ಕಂಪನಿಗಳುವರು ಎಷ್ಟು ಸರಬರಾಜು ಮಾಡಿದರೆ ಅಷ್ಟನ್ನು ಮಾತ್ರ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ರಸಗೊಬ್ಬರ ಮಾರಾಟ ಮಾಡುವ ಅಂಗಡಿ ಮಾಲೀಕರೊಬ್ಬರು.
ತಾಲ್ಲೂಕಿನಲ್ಲಿ ಈ ವರ್ಷದ ಮುಂಗಾರಿನಲ್ಲಿ 19,220 ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬಿತ್ತನೆ ಮಾಡುವ ಗುರಿಯನ್ನು ಅಂದಾಜಿಸಲಾಗಿದೆ. ಇಲ್ಲಿಯವರೆಗೆ 1,413 ಹೆಕ್ಟೇರ್ ಪ್ರದೇಶದಲ್ಲಿ, ಅಂದರೆ ಶೇ.7.35ರಷ್ಟು ಬಿತ್ತನೆಯಾಗಿದೆ. ಹಾಗೆಯೇ ಮುಸುಕಿನಜೋಳ 5,690 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 667 ಹೆಕ್ಟೇರ್ ಪ್ರದೇಶದಲ್ಲಿ,ಅಂದರೆ ಶೇ.11.72 ರಷ್ಟು ಬಿತ್ತನೆಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….