ಬೆಂ.ಗ್ರಾ.ಜಿಲ್ಲೆ, (ಜುಲೈ.10); ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ರೈತರನ್ನು ಆರ್ಥಿಕವಾಗಿ ಕೈಹಿಡಿಯಬೇಕಾದ ಬೆಳೆ ವಿಮೆ ಯೋಜನೆಗೆ ಇತ್ತೀಚಿನ ವರ್ಷಗಳಲ್ಲಿ ಕಂಪನಿಗಳ ಮೋಸದಿಂದ ಬೇತ್ತಿರುವ ಜಿಲ್ಲೆಯ ರೈತರಲ್ಲಿ ವಿಮೆ ಮಾಡಿಸಲು ನಿರುತ್ಸಾಹ ಕಂಡುಬರುತ್ತಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಹುತೇಕ ಅನ್ನದಾತರು ಬೆಳೆವಿಮೆಯತ್ತ ಮುಖ ಮಾಡದೆ ಉಳಿದಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಜುಲೈ.9 ರ ವರದಿ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೇವಲ 586 ಮಂದಿ ರೈತರು ಮಾತ್ರ ವಿಮೆ ಮಾಡಿಸಿದ್ದು, ವಿಮೆ ಕಂಪನಿಗಳ ಮೋಸದಿಂದ ಬೇಸತ್ತಿರುವುದಕ್ಕೆ ಸಾಕ್ಷಿಯಾಗಿದೆ.
2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಮಾ ಸಂಸ್ಥೆ ಮೋಸ ಮಾಡಿದೆ ಎಂಬ ಆರೋಪ ರೈತರದ್ದು. ಮಳೆ ಇಲ್ಲದೆ ಬರ ಪೀಡಿತ ಜಿಲ್ಲೆಯೆಂದು ರಾಜ್ಯ ಸರ್ಕಾರದ ಘೋಷಣೆಯ ನಡುವೆಯೂ ವಿಮಾ ಸಂಸ್ಥೆ ರಾಗಿ ಬೆಳೆಗೆ ವಿಮೆ ಮಾಡಿಸಿದ ರೈತರಿಗೆ ಹಗಲು ದರೋಡೆ ಮಾಡಿದೆ ಎಂಬುದು ರೈತ ಸಂಘಟನೆಗಳ ಆಕ್ರೋಶ.
ವಿಮೆ ನೊಂದಣಿ ಆರಂಭವಾಗಿ ಒಂದು ತಿಂಗಳು ಕಳೆದಿದ್ದರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೇವಲ 586 ಮಂದಿ ರೈತರು ಮಾತ್ರ ನೊಂದಣಿ ಮಾಡಿಸಿರುವುದು ವಿಮೆಯಿಂದ ರೈತರು ವಿಮುಖವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇನ್ನೂ ಈ ಕುರಿತು ಪ್ರಚಾರ ಮಾಡಬೇಕಾದ ಕೃಷಿ ಇಲಾಖೆ ಅಧಿಕಾರಿಗಳಿಗೂ ಆತಂಕ ಎದುರಾಗಿದ್ದು, ಕಳೆದ ವರ್ಷದ ಪರಿಹಾರ ಎಲ್ಲಿ ಎಂದು ರೈತರು ಪ್ರಶ್ನಿಸಿದರೆ, ಅಧಿಕಾರಿಗಳ ಬಳಿಯೂ ಸಮರ್ಪಕ ಉತ್ತರ ಇಲ್ಲವಾಗಿದ್ದು, ಈವರೆಗೆ ಬಹುತೇಕ ಕಡೆ ಪ್ರಚಾರ ಕಾರ್ಯಕ್ಕೆ ಮುಂದಾಗದೆ, ಕೇವಲ ಮಾಧ್ಯಮ ಪ್ರಕಟಣೆಗೆ ಸೀಮಿತವಾಗಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಫಸಲ್ ವಿಮೆ ಯೋಜನೆ ರೈತರಿಗೆ ವರವಾಗಲೆಂದು ಕೇಂದ್ರ ಸರ್ಕಾರ ರೂಪಿಸಿದೆಯಾದರೂ… ಇದು ವಿಮಾ ಕಂಪನಿಗಳಿಗೆ ಲಾಭದಾಯಕ ಯೋಜನೆ ಎಂಬ ಅನುಮಾನ ಕಾಡುತ್ತಿದೆ.
ಆರಂಭಿಕ ವರ್ಷಗಳಲ್ಲಿ ವಿಮೆ ಪರಿಹಾರ ಸಮರ್ಪಕವಾಗಿ ನೀಡಿದ್ದು ಬಿಟ್ಟರೆ, ಬಹುತೇಕ ಕಡೆಗಳಲ್ಲಿ ರೈತರಿಗೆ ಅನ್ಯಾಯವಾಗಿದೆ. ಆದಾಗ್ಯೂ ಕೆಲ ಜಿಲ್ಲೆಗಳಲ್ಲಿ ಉತ್ತಮ ಪರಿಹಾರ ನೀಡಲಾಗಿದೆ. ಇದಕ್ಕೆ ಅಲ್ಲಿನ ಜನಪ್ರತಿನಿದಿಗಳು, ಅಧಿಕಾರಿಗಳ ಕಾಳಜಿ ಕಾರಣ ಎನ್ನಬಹುದು.
ಕಳೆದ ವರ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬರ ಪೀಡಿತ ಜಿಲ್ಲೆಯೆಂದು ಘೋಷಿಸಿದ್ದರು, ವಿಮಾ ಸಂಸ್ಥೆ, ಕೃಷಿ, ಕಂದಾಯ, ಪಂಚಾಯಿತಿ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ್ಯ ನಡೆಸದೆ, ವಿಮೆ ಕಂಪನಿಯವರು ಅವರಿಗೆ ಬೇಕಾದಂತೆ ಸರ್ವೆ ನಡೆಸಿ ರೈತರಿಗೆ ದೊರಕಬೇಕಾದ ಪರಿಹಾರ ದೊರಕದೆ ಯೋಜನೆಯಿಂದ ಹಿಂದೆ ಸರಿಯಲು ಕಾರಣ ಎಂಬ ಆಕ್ರೋಶ ರೈತರದ್ದಾಗಿದೆ.
ರೈತರ ಕಷ್ಟದಲ್ಲಿ ಸರಕಾರ ಬೆನ್ನಿಗೆ ನಿಲ್ಲಬೇಕು. ಆದರೆ ವಿಮೆ ಹಣ ಕಟ್ಟಿದ್ದರು, ಪರಿಹಾರ ದೊರಕದೆ ಇರುವುದು ವಿಪರ್ಯಾಸ. ಕೂಡಲೇ ಜಿಲ್ಲೆಯ ಜನಪ್ರತಿನಿದಿಗಳು, ಅಧಿಕಾರಿಗಳು ಗಮನಹರಿಸಬೇಕು, ಇಲ್ಲವಾದರೆ ರೈತರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ರಾಜಘಟ್ಟರವಿ ನೀಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….