ಬೆಂಗಳೂರು, (ಜುಲೈ.09): ಫ.ಗು.ಹಳಕಟ್ಟಿಯವರು ವಚನ ಸಂರಕ್ಷಣೆಯ ಕೆಲಸ ಮಾಡದಿದ್ದರೆ ಬಸವಣ್ಣ ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಅವರಿಂದಾಗಿ 250 ವಚನಕಾರರು ಬೆಳಕಿಗೆ ಬಂದಿದ್ದಾರೆ. ಅದಕ್ಕಿಂತ ಮೊದಲು ಕೇವಲ 40 ವಚನಕಾರರು ಮಾತ್ರ ನಾಡಿನ ಜನರಿಗೆ ಗೊತ್ತಾಗಿದ್ದರಷ್ಟೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬಿಎಂಶ್ರೀ ಅವರು ಹೇಳಿದ ಹಾಗೆ ಹಳಕಟ್ಟಿ ಅವರು ವಚನ ಗುಮ್ಮಟವಾಗಿದ್ದರು. ಮಂಗಳೂರಿನ ಬಾಸೆಲ್ ಮಿಷನ್ ಸಂಸ್ಥೆಯು ಕ್ರಿಶ್ಚಿಯನ್ ಧರ್ಮಕ್ಕೆ ಧಕ್ಕೆ ಆಗುತ್ತದೆ ಎಂದು ಹೇಳಿ ಹಳಕಟ್ಟಿವರು ಕೊಟ್ಟ ವಚನಗಳನ್ನು ಮುದ್ರಿಸಲಿಲ್ಲ. ಆಗ ಹಳಕಟ್ಟಿಯವರು ಸ್ವಂತ ಮನೆ ಮಾರಾಟ ಮಾಡಿ, ವಚನಗಳನ್ನು ಅಚ್ಚು ಹಾಕಿಸಿದರು. ಎಂ ಎಂ ಕಲ್ಬುರ್ಗಿ ಅವರ ಪ್ರಯತ್ನದ ಫಲವಾಗಿ ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆ ಹುಟ್ಟಿತು ಎಂದು ಅವರು ನೆನೆದರು.
ವಿಜಯಪುರದಲ್ಲಿ ಬಿಎಲ್ ಡಿ ಶಿಕ್ಷಣ ಸಂಸ್ಥೆ, ಸಿದ್ಧೇಶ್ವರ ಬ್ಯಾಂಕ್, ಭೂತನಾಳ ಕೆರೆ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಸವಾದಿ ಶರಣರನ್ನು ನೆನೆಯುವಾಗ ಹಳಕಟ್ಟಿಯವರನ್ನೂ ನೆನೆಯಬೇಕು ಎಂದು ಅವರು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಗದಗದ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಗೌರವ ತಂದುಕೊಟ್ಟ ಸಾಹಿತ್ಯ ಅಂದರೆ ಅದು ವಚನ ಸಾಹಿತ್ಯ’ ಎಂದು ಹೇಳಿದರು.
ಆಶಯ ಭಾಷಣ ಮಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ’12ನೇ ಶತಮಾನದ ವಚನ ಸಾಹಿತ್ಯವನ್ನು ಪುನರ್ ಸೃಷ್ಟಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಡೋಜ ಚಂದ್ರಶೇಖರ ಕಂಬಾರ ಮಾತನಾಡಿದರು. ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕದಳಿ ಮಹಿಳಾ ವೇದಿಕೆಯ ಪ್ರಮೀಳಾ ಗರಡಿ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….