ದೊಡ್ಡಬಳ್ಳಾಪುರ, (ಜುಲೈ.09); ಕೆರೆಯಂಗಳದಲ್ಲಿ ಮೇಯುತ್ತಿದ್ದ ಹಸುವಿನ (ಪಡ್ಡೆ) ಮೇಲೆ ಚಿರತೆ ದಾಳಿ ನಡೆಸಿ, ಬಲಿ ಪಡೆದಿರುವ ಘಟನೆ ಬೆಟ್ಟದ ಸೊಣ್ಣೇನಹಳ್ಳಿಯಲ್ಲಿ ಸಂಭವಿಸಿದೆ.
ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಗೆ ಒಳಪಡುವ ಬೆಟ್ಟದ ಸೊಣ್ಣೇನಹಳ್ಳಿ ಗ್ರಾಮದ ಮೃತ್ಯುಂಜಯ ಮೂರ್ತಿ ಎನ್ನುವವರು ಪ್ರತಿ ನಿತ್ಯದಂತೆ ಇಂದು ಕೂಡ ಗ್ರಾಮದ ಹೊರವಲಯದಲ್ಲಿರುವ ಕೆರೆಯಂಗಳದಲ್ಲಿ ಜಾನುವಾರುಗಳನ್ನು ಮೇಸಲು ತೆರಳಿದ್ದಾರೆ.
ಸಂಜೆ ನಾಲ್ಕು ಗಂಟೆ ಸುಮಾರಿಗೆ ಹಸುವೊಂದರ ಮೇಲೆ ಚಿರತೆ ದಾಳಿ ನಡೆಸಿದ್ದು, ಕುತ್ತಿಗೆಗೆ ಬಾಯಿಂದ ಕಚ್ಚಿದೆ. ಇದನ್ನು ಗಮನಿಸಿದ ಮೃತ್ಯುಂಜಯ ಮೂರ್ತಿ ಹಾಗೂ ಇತರೆ ರೈತರು ಕೂಗಾಡಿದಾಗ ಹಸುವನ್ನು ಬಿಟ್ಟು ಚಿರತೆ ಪರಾರಿಯಾಗಿದೆ.
ಆದರೆ ಸ್ಥಳಕ್ಕೆ ತೆರಳಿ ನೋಡಿದಾಗ ಹಸು ಸಾವನಪ್ಪಿರುವುದು ತಿಳಿದು ಬಂದಿದ್ದು, ಕೂಡಲೇ ಎಚ್ಚೆತ್ತ ರೈತರು ಇತರೆ ಹಸು, ಕರುಗಳನ್ನು ಊರಿಗೆ ಕರೆತಂದಿದ್ದಾರೆ. ಮತ್ತೆ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ, ಹಸು ಬಿಟ್ಟು ಪರಾರಿಯಾಗಿದ್ದ ಚಿರತೆ, ಮತ್ತೆ ಬಂದು ಹಸುವನ್ನು ಸುಮಾರು ನೂರು ಮೀಟರ್ ದೂರಕ್ಕೆ ಎಳೆದೊಯ್ದು ಭಕ್ಷಿಸಲು ಮುಂದಾಗಿದ್ದು, ರೈತರನ್ನು ಕಂಡು ಮತ್ತೆ ಪರಾರಿಯಾಗಿದೆ.
ಈ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಪದೆ ಪದೇ ಕಂಡು ಬರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆ ಹಿಡಿಯಲು ಕ್ರಮಕೈಗೊಳ್ಳುವುದರ ಜೊತೆಗೆ, ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….