ದೊಡ್ಡಬಳ್ಳಾಪುರ, (ಜುಲೈ.08); ತಾಲ್ಲೂಕಿನ ಕೊನಘಟ್ಟ,ನಾಗದೇನಹಳ್ಳಿ ಸುತ್ತ ಕೆಐಎಡಿಬಿ ಕೃಷಿ ಜಮೀನು ಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ರೈತರು ತಾಲ್ಲೂಕು ಕಚೇರಿವರೆಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊನಘಟ್ಟ ಗ್ರಾಮದ ರೈತ ಮುಖಂಡ ಆನಂದ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಹಣ್ಣು, ತರಕಾರಿ ಬೆಳೆಯುತ್ತಿರುವ ಫಲವತ್ತಾದ ಕೃಷಿ ಜಮೀನು ಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರದ ಎಲ್ಲಾ ಕಾನೂನುಗಳನ್ನು ಕೆಐಎಡಿಬಿ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಕಾನೂನಿನಲ್ಲಿ ಇರುವ ಯಾವುದೇ ನಿಯಮಗಳನ್ನು ಪಾಲಿಸಿಲ್ಲ.
ಕೆಐಎಡಿಬಿ ಅಧಿಕಾರಿಗಳ ರೈತ ವಿರೋಧಿ ಧೋರಣೆ ಖಂಡಿಸಿ 165 ದಿನಗಳಿಂದಲೂ ಭೂಸ್ವಾಧಿನಕ್ಕೆ ಒಳಪಟ್ಟಿರುವ ಸ್ಥಳದಲ್ಲಿಯೇ ರೈತರು ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿದಂತೆ ಯಾರು ಸೌಜನ್ಯಕ್ಕಾದರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವಿಯನ್ನು ಆಲಿಸಿಲ್ಲ. ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಲವಾರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿಗೆ ಭೂಸ್ವಾಧೀನದ ಪರಿಹಾರ ಪಡೆಯುವಾಗ ಮಾತ್ರ ಮಾರುಕಟ್ಟೆ ಬೆಲೆಗಿಂತಲು ಮೂರುಪಟ್ಟು ಪರಿಹಾರ ಅಥವಾ ಅದೇ ಬೆಲೆ ಬದಲಿ ಜಾಗ ಪಡೆದಿದ್ದಾರೆ. ಅದೇ ಮಾದರಿಯಲ್ಲೇ ನಮ್ಮ ಕೃಷಿ ಭೂಮಿಗೂ ಕೆಐಎಡಿಬಿ ಪರಿಹಾರ ನೀಡಬೇಕು. ಈಗ ನಡೆಯುತ್ತಿರುವ 971 ಎಕರೆ ಭೂಸ್ವಾಧೀನದಿಂದ ನಾಲ್ಕು ಗ್ರಾಮಗಳ 600 ಕುಟುಂಬಗಳು ಭೂಮಿ ಕಳೆದುಕೊಳ್ಳಲಿವೆ.
ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ವೈಜ್ಞಾನಿಕ ಪರಿಹಾರವಾದರು ದೊರೆತರೆ ಬೇರೆಡೆ ನೆಲೆ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇಲ್ಲವಾದರೆ ಈ ಎಲ್ಲಾ ಕುಟುಂಬಗಳು ಕನಿಷ್ಠ ಬೆಲೆಗೆ ಭೂಮಿ ಕಳೆದುಕೊಂಡು ಬೀದಿಪಾಲಾಗಲಿವೆ ಎಂದರು.
ಪ್ರತಿಭಟನೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಗ್ರಾಮಗಳ ರೈತ ಮುಖಂಡರಾದ ಕೋಡಿಹಳ್ಳಿ ಕೃಷ್ಣಪ್ಪ, ಕೊನಘಟ್ಟ ನರಸಿಂಹಮೂರ್ತಿ, ರಮೇಶ್,ನಾಗದೇನಹಳ್ಳಿ ಶ್ರೀನಿವಾಸಮೂರ್ತಿ, ಸೊಣ್ಣಪನಹಳ್ಳಿ ಚಿಕ್ಕನರಸಪ್ಪ, ಮೋಪರಹಳ್ಳಿನಾಗರಾಜ್, ಕೋಡಿಹಳ್ಳಿ ಶಿವಕುಮಾರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….