ಬೆಂಗಳೂರು (ಜುಲೈ.01): ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಎಲ್ಲಾ ಉದ್ಯೋಗಗಳನ್ನು ನೀಡುವಂತೆ ಸೂಕ್ತ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸೋಮವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕಡ್ಡಾಯ ಉದ್ಯೋಗ ಮೀಸಲು ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಯಿಂದ ಸಂಜೆ 4 ಗಂಟೆವರೆಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಏಕಕಾಲದಲ್ಲಿ ಪ್ರತಿಭಟನೆಗಳು ಜರುಗಲಿವೆ.
ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿ ನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಖಾಸಗಿ ವಲಯದಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಕನ್ನಡಿಗರಿಗೆ ಅನ್ಯಾಯ ವಾಗುತ್ತಿದೆ.
ಖಾಸಗಿ ವಲಯದಲ್ಲಿ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳು ಶೇ.100 ರಷ್ಟು ಕನ್ನಡಿಗರಿಗೆ ಮೀಸಲು ನೀಡಬೇಕು. ಇತರೆ ಗ್ರೂಪ್‌ಗಳಲ್ಲಿ ಶೇ.80 ರಷ್ಟು ಮೀಸಲು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತದೆ.
ಪ್ರಮುಖ ಬೇಡಿಕೆ;
1. ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯಿದೆ 1946 ರ ಅನ್ವಯ ಬಲಿಷ್ಠ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡಬೇಕು.
2. ಖಾಸಗಿ ಸಂಸ್ಥೆಗಳ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳು ಶೇ.100 ಕನ್ನಡಿಗರಿಗೆ ಮೀಸಲಿಡಬೇಕು.
3. ಖಾಸಗಿ ಸಂಸ್ಥೆಗಳ ಇತರೆ ಹುದ್ದೆಯಲ್ಲಿ ಶೇ.80 ಕನ್ನಡಿಗರಿಗೆ ಮೀಸಲಿಡಬೇಕು.
4. 15 ವರ್ಷ ರಾಜ್ಯದಲ್ಲಿದ್ದವರಿಗೆ ಕನ್ನಡಿಗರೆಂದು ಪರಿಗಣಿಸುವ ನಿಯಮವಿದ್ದು, ಅಂತವರಿಗೆ ಕನ್ನಡ ಪರೀಕ್ಷೆ ನಡೆಸಿ ಉತ್ತೀರ್ಣರಾದರೆ ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.
5. ನಿಯಮ ಪಾಲಿಸದ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಬೇಕು. ಸರಕಾರ ನೀಡಿರುವ ಭೂಮಿ, ಸವಲತ್ತುಗಳನ್ನು ವಾಪಸ್ ಪಡೆದು ಕ್ರಿಮಿನಲ್ ಮೊಕದ್ದಮೆ ಹಾಕಬೇಕು.
6. ರಾಜ್ಯ ಸರಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯದಲ್ಲಿ ಶೇ.100 ಕನ್ನಡಿಗರಿಗೆ ಮೀಸಲು ನೀಡಬೇಕು.
7. ಕೇಂದ್ರ ಸರಕಾರದ ಇಲಾಖೆಗಳಲ್ಲಿ ಗ್ರೂಪ್ ‘ಸಿ’ ಹಾಗೂ ‘ಡಿ’ ಹುದ್ದೆಗಳಲ್ಲಿ ಶೇ.100 ಕನ್ನಡಿಗರಿಗೆ ಮೀಸಲು ನೀಡಬೇಕು.
8. ಕೇಂದ್ರ ಸರಕಾರದ ಇಲಾಖೆಗಳಲ್ಲಿ ಗ್ರೂಪ್ ‘ಸಿ’, ‘ಡಿ’ ಹೊರತಾದ ಉಳಿದ ಉದ್ಯೋಗದಲ್ಲಿ ಶೇ.90 ಮೀಸಲು ನೀಡಬೇಕು.
9. ಕನ್ನಡಿಗರಿಗೆ ಮೀಸಲು ಕಲ್ಪಿಸಲು ವಿಫಲವಾಗುವ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ಈ ಅಂಶವನ್ನು ಉದ್ದೇಶಿತ ಕಾನೂನಿನಲ್ಲಿ ಸೇರಿಸಬೇಕು.
10. ರಾಜ್ಯ ಸರಕಾರ ರೂಪಿಸುವ ಕಾನೂನು ಜಾರಿ ಮಾಡಲು ಕನ್ನಡ ಪ್ರಾಧಿಕಾರಕ್ಕೆ ಅಧಿಕಾರ ನೀಡಬೇಕು. (ಸಂಗ್ರಹ ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….