ಬೆಂಗಳೂರು, (ಜೂ.29): ಮುಖ್ಯಮಂತ್ರಿಗಳನ್ನು ಬದಲಿಸಬೇಕೆಂಬ ಸ್ವಾಮೀಜಿಗಳ ಹೇಳಿಕೆಗಳ ಹಿಂದೆ ಯಾರದ್ದೋ ಕೈವಾಡ ಇರಬಹುದು ಎಂದು ಕೃಷಿಸಚಿವ ಎನ್.ಚಲುವರಾಯಸ್ವಾಮಿ ಶಂಕೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರನಾಥ ಸ್ವಾಮೀಜಿ ಮತ್ತು ಲಿಂಗಾಯತರು ಸಿಎಂ ಆಗಬೇಕೆನ್ನುವ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗಳ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸ್ವಾಮೀಜಿಗಳು ಸಿಎಂ ಬದಲಾವಣೆ ವಿಚಾರ ಸಾರ್ವಜನಿಕವಾಗಿ ಹೇಳುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಗ್ಗಟ್ಟಾಗಿದ್ದು, ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಾಮೀಜಿಗಳು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಆದರೆ ಈ ಕುರಿತು ಹೇಳುವ ವೇದಿಕೆ ಅದಾಗಿರಲಿಲ್ಲ ಎಂದರು. ಆದರೆ ಸ್ವಾಮೀಜಿಗಳಿಗೆ ಅಲ್ಲಿ ಮಾತಾಡಿ, ಇಲ್ಲಿ ಮಾತಾಡಿ ಎಂದು ನಾವು ನಿರ್ದೇಶನ ನೀಡಲು ಆಗುವುದಿಲ್ಲ. ಅವರ ಭಾವನೆಗೆ ತಕ್ಕಂತೆ ಹೇಳಿದ್ದಾರೆ ಎಂದೂ ಸ್ಪಷ್ಟಪಡಿಸಿದರು.
ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸ್ವಾಮೀಜಿಗಳ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಬಳಿಕ ಇದೀಗ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಕುರಿತು ಶ್ರೀಶೈಲ ಜಗದ್ಗುರುಗಳ ಹೇಳಿಕೆ ನೀಡಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧ ಇಲ್ಲ. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೆ. ಅದಕ್ಕೆ ತುಂಬಾ ಮಹತ್ವ ಕೊಡುವ ಅಗತ್ಯವಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡುವುದು ಶಾಸ ಕರು ಮತ್ತು ಆಯಾ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….