ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ.
ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ ಐಹಿಕ ಸಂಪತ್ತು (ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು.
ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿರುತ್ತೇವೆ. ಹಿಂದಿನ ಜನ್ಮದಲ್ಲಿ ಎಲ್ಲಿ ನಿಂತಿದ್ದೇವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ.
ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ. ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೇವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭವಾಗಿ ಮುಂದುವರಿಯುತ್ತದೆ.
ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ. ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ.
ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ ಜನ್ಮ ಸಾಧನೆ ಮಾಡಬೇಕು. ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಅಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು ಆರಂಭಿಸಿ. ಅದು ನಿಮ್ಮನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ.
ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ.
ಕೃಪೆ: ಸನಾತನ ಸಂಸ್ಥೆ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….