ಚಿಕ್ಕಬಳ್ಳಾಪುರ, (ಜೂ.25): ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೊದಲನೇ ಹೆಂಡತಿಯನ್ನು ಗಂಡ ಹಾಗೂ ಎರಡನೇ ಹೆಂಡತಿಯ ಮಗ ಸೇರಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಐವತ್ತು ವರ್ಷದ ಪದ್ಮಮ್ಮ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, 60 ವರ್ಷದ ಮುನಿರೆಡ್ಡಿ ಹಾಗೂ ಈತನ ಎರಡನೇ ಪತ್ನಿಯ ಮಗ ಗಿರೀಶ್ ಕೊಲೆ ಮಾಡಿದ ಆರೋಪಿಗಳು.
ಮೊದಲನೇ ಹೆಂಡತಿ ಪದ್ಮಮ್ಮಳಿಗೆ ಇಬ್ಬರು ಗಂಡು ಮಕ್ಕಳಿದ್ದು ದುರಾದೃಷ್ಟವಶಾತ್ ಇಬ್ಬರೂ ಗಂಡು ಮಕ್ಕಳು ಸಾವನ್ನಪ್ಪಿದ್ದಾರೆ. ಹಾಗಾಗಿ ಪದ್ಮಮ್ಮಳಿಗೆ ಕೊಟ್ಟಿದ್ದ ಆಸ್ತಿಯನ್ನು ಗಂಡ ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದಾನೆ.
ಮಕ್ಕಳಿಲ್ಲದ ನಿನಗೆ ಏಕೆ ಆಸ್ತಿ ಬೇಕು ನಾನು ನಿನಗೆ ಆಸ್ತಿ ಕೊಡುವುದಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಇದೇ ವಿಚಾರ ನ್ಯಾಯಾಲಯದ ಮೆಟ್ಟಿಲು ಸಹ ಏರಿದೆ. ಆದರೆ ಇಂದು ಬೆಳಗ್ಗೆ ಗಂಡ ಮುನಿರೆಡ್ಡಿ ಮಚ್ಚಿನಿಂದ ಕೊಚ್ಚಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಕೊಲೆ ಆರೋಪಿ ಗಂಡ ಮುನಿರೆಡ್ಡಿ ಹಾಗೂ ಆತನ ಎರಡನೇ ಹೆಂಡತಿಯ ಮಗನ ಸದ್ಯಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅಂತ ತಿಳಿದು ಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….