ಅತೀ ವೃಷ್ಟಿ ಹಾಗೂ ಅನಾವೃಷ್ಟಿ ಗಳಿಂದ ನೊಂದ ರೈತನೊಬ್ಬನಿಗೆ,ಭಗವಂತನ ಮೇಲೆ ತುಂಬಾ ಬೇಸರವಾಯ್ತ. ಭಗವಂತ ಅವನ ಎದುರಿಗೆ ಬಂದು ,ನಾನೇನು ಮಾಡಬೇಕು ಹೇಳು ಎಂದ.
ವ್ಯವಸಾಯದ ಬಗ್ಗೆ ನೀನಗೇನು ಗೊತ್ತು, ಭಗವಂತ, ನಮ್ಮಂಥ ರೈತರನ್ನು ಕೇಳಿ ನೀನು, ಮಳೆ ಬಿಸಿಲನ್ನು ನೀಡಬೇಕು, ಅಕಾಲಿಕ ಮಳೆ, ಬರಗಾಲದಿಂದ ಕಷ್ಟ ಅನುಭವಿಸುವವರು ನಾವೇ ತಾನೇ ಎಂದ ರೈತ.
ಭಗವಂತ ನಗುತ್ತಾ, ಈ ಒಂದು ವರ್ಷ ನೀನು ಹೇಳಿದ ರೀತಿಯಲ್ಲೇ ಮಳೆ ಬಿಸಿಲನ್ನು ನೀಡುತ್ತೇನೆ, ನಿನಗೆ ಒಂದು ವರ್ಷ ಅವಕಾಶವಿದೆ ಅದನ್ನು ಉಪಯೋಗಿಸಿಕೊ ಎಂದು ಹೇಳಿ ಹೋದ.
ರೈತನಿಗೆ ತುಂಬಾ ಖುಷಿಯಾಯಿತು, ರೈತ ಯಾವಾಗ ಬಿಸಿಲು ಬಯಸಿದನೋ ಆಗ ಬಿಸಿಲು ಬಂತು, ಮಳೆ ಬಯಸಿದಾಗ ಮಳೆ ಬಂತು, ಸ್ವಲ್ಪ ಕೊಡಾ ಹೆಚ್ಚು ಕಡಿಮೆ ಆಗಲಿಲ್ಲ. ಬತ್ತದ ಪೈರುಗಳೆಲ್ಲಾ ಎತ್ತರವಾಗಿ ಬೆಳೆದು ನಿಂತವು, ನೋಡಲು ತುಂಬಾ ಸೊಗಸಾಗಿ ಕಾಣುತ್ತಿದ್ದವು, ರೈತನಿಗೆ ತುಂಬಾ ಸಂತೋಷವಾಗಿತ್ತು.
ರೈತ ಅಂದುಕೊಂಡ ಪರಮಾತ್ಮನಿಗೆ ಈಗ ಗೊತ್ತಾಗುತ್ತದೆ, ಅದೆಷ್ಟು ಸಮಯದಿಂದ ವ್ಯರ್ಥವಾಗಿ ರೈತರನ್ನು ಸಮಸ್ಯೆಯಲ್ಲಿ ಸಿಲುಕಿಸುತ್ತಿದ್ದ, ಯಾರಾದರೂ ಒಬ್ಬ ರೈತನನ್ನು ಕೇಳಿದ್ದರೆ, ಈ ರೀತಿಯ ಸಮಸ್ಯೆ ಯೇ ಆಗುತ್ತಿರಲಿಲ್ಲ, ಈಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ, ಅಂದುಕೊಂಡ.
ಭತ್ತದ ಫಸಲೇನೊ ಚೆನ್ನಾಗಿ ಬೆಳೆದಿದ್ದವು, ನೋಡಲು ತುಂಬಾ ಚೆನ್ನಾಗಿದ್ದವು. ಆದರೆ ಅದರಲ್ಲಿ ಕಾಳುಗಳು ಇರದೆ ಬರೀ ಜೊಳ್ಳಾಗಿದ್ದವು, ರೈತ ಎದೆ ಬಡಿದು ಕೊಳ್ಳುತ್ತಾ ಹೇ, ಪರಮಾತ್ಮ, ಇದೇಕೆ ಹೀಗಾಯಿತು ಎಂದು ಕಿರುಚಿದ.
ಭಗವಂತ ಬಂದು ಹೇಳಿದ, ನೀನು ಬಿರುಗಾಳಿ, ಮಿಂಚು, ಗುಡುಗು, ಸಿಡಿಲು ಬರಲು ಬಿಡಲಿಲ್ಲ, ಅವು ಎಲ್ಲಾ ಒಟ್ಟು ಗೂಡಿ ಘರ್ಷಣೆ ಆಗಲು ಬಿಡಲಿಲ್ಲ, ಫಸಲು ಚೆನ್ನಾಗೇನೋ ಬೆಳೆದವು, ಆದರೆ ಅವು ಸತ್ವಯುತವಾಗಲಿಲ್ಲ, ಬಿರುಗಾಳಿ ಗುಡುಗು, ಮಿಂಚು, ಇವುಗಳ ಘರ್ಷಣೆಯಿಂದ ಸಸ್ಯಗಳು ತಮ್ಮ ಬಲದಿಂದ ಸೆಟೆದು ನಿಲ್ಲುತ್ತವೆ. ಹೇಗಾದರೂ ಎದ್ದು ನಿಲ್ಲಬೇಕೆಂಬ ಮನೋಭಾವ ಅವುಗಳಲ್ಲಿ ಬಂದು ಅವು ಸತ್ವಯುತವಾಗುತ್ತವೆ. ಹಾಗೇ ಗಟ್ಟಿಯಾಗಿ ಕಾಳುಕಟ್ಟುತ್ತವೆ, ಸಂಘರ್ಷದಲ್ಲೇ ಶಕ್ತಿ, ಸುಪ್ತವಾಗಿರುವುದು ಎಂದು ರೈತನಿಗೆ ಭಗವಂತ ತಿಳಿ ಹೇಳಿದ.
ನೋವಿನಿಂದಲೇ ಅಲ್ಲವೇ, ಎಲ್ಲಾ ಹೊಸತುಗಳ ಹುಟ್ಟು. ಕಹಿಯ ಕಲ್ಮಶವೆಲ್ಲಾ ಉರಿದು ಸುಟ್ಟಾಗಲೇ ಹೊಸರೂಪ, ಹೊಸತೇಜಸ್ಸು ಉಂಟಾಗುವುದು. ಹಾಗೆಯೇ, ತಾಯಿಗೆ ಪ್ರಸವ ಯಾತನೆ ಇಲ್ಲದೇ ಇದ್ದರೆ, ಮಗುವಿನ ಜನನವಾಗುವುದಿಲ್ಲ. ಆದ್ದರಿಂದಲೇ ತಾಯಿಗೆ ಮಗುವಿನ ಬಗ್ಗೆ ಅಪಾರವಾದ ಪ್ರೀತಿಯಿರುತ್ತದೆ. ಎಲ್ಲವೂ ಸುಲಭವಾಗಿ ದೊರೆಯುವಂತಿದ್ದರೆ, ನಮಗೆ ಅದರಲ್ಲಿ ಯಾವ ಆನಂದವೂ ಇರುವುದಿಲ್ಲ, ಕಷ್ಟ ಅನುಭವಿಸಿದಾಗಲೇ, ಸುಖದ ಆನಂದವಿರುವುದು.
ಕೃಪೆ: ಸುವರ್ಣಾ ಮೂರ್ತಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….