ದೊಡ್ಡಬಳ್ಳಾಪುರ, (ಜೂ.19): ಫಸಲ್ ವಿಮೆ ಮಾತ್ರವಲ್ಲ ಕೇಂದ್ರ ಸರಕಾರದ ಎಲ್ಲಾ ಯೋಜನೆಗಳು ಕೇವಲ ಪ್ರಚಾರಕ್ಕೆ ಹೊರತು, ಜನಸಾಮಾನ್ಯರ ಉದ್ಧಾರಕ್ಕಾಗಿ ಅಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಬೇಸರ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಫಸಲ್ ವಿಮೆ ಯೋಜನೆಯಲ್ಲಿ ಹಣ ಕಟ್ಟಿದ ಬರ ಘೋಷಿಸಲಾದರು ಪರಿಹಾರ ಹಣ ನೀಡದೆ ರೈತರಿಗೆ ಅನ್ಯಾಯವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬರದಿಂದ ಬಸವಳಿದಿದ್ದ ರೈತರಿಗೆ ರಾಜ್ಯ ಸರ್ಕಾರ ಕೇಂದ್ರ ಸರಕಾರದ ವಿರುದ್ಧ ಕಾನೂನು ಹೋರಾಟ ನಡೆಸಿ ಬರ ಪರಿಹಾರ ಕೊಡಿಸಿದೆ. ಆದರೆ ರೈತರು ಬೆಳೆಗೆಂದು ಮಾಡಿಸಿದ್ದ ವಿಮೆ ಹಣ ಕೊಡಿಸಲು ಕೂಡ ಕೇಂದ್ರ ಸರ್ಕಾರ ವಿಫಲವಾಗಿದೆ.
ರೈತರಿಗೆ ಎರಡು ಸಾವಿರ ನೀಡುತ್ತೇವೆ ಎಂಬುದು ಬಹುದೊಡ್ಡ ನಾಟಕ, ಇಕೆವೈಸಿ ಹೆಸರಲ್ಲಿ ಅನೇಕ ರೈತರಿಗೆ ಹಣ ಸಂದಾಯವಾಗುತ್ತಿಲ್ಲ. ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ವಿರುದ್ಧ ರೈತರು, ಬಡವರು, ಮಧ್ಯಮ ವರ್ಗದ ಜನ ಬೇಸತ್ತು ಹೋಗಿದ್ದಾರೆ.
ತೈಲ ಬೆಲೆ ಹೆಚ್ಚಳದ ಕುರಿತು ಬಿಜೆಪಿಯ ನಾಟಕ ಜನರಿಗೆ ತಿಳಿದಿದೆ. 3 ರೂ ಹೆಚ್ಚಳದ ಬಗ್ಗೆ ಮಾತಾಡ್ತಾ ಇರೋರು.. 97 ರೂ. ಆಗಲು ಕಾರಣ ಯಾರು..? ಗ್ಯಾಸ್ ಬೆಲೆ ಸಾವಿರ ಗಡಿ ಮೀರಲು, ಸಬ್ಸಿಡಿ ಕಡಿತವಾಗಲು ಕಾರಣ ಯಾರು ಎಂಬುದನ್ನು ಪ್ರಶ್ನಿಸಬೇಕಿದೆ.
ಬರದಿಂದಾಗಿ ಬೆಳೆ ಕಳೆದುಕೊಂಡಿರುವ ರೈತರು, ಸರಕಾರ, ಕೃಷಿ ಇಲಾಖೆಯ ಜಾಹಿರಾತುಗಳಿಗೆ ಮನಸೋತು, ಸಾಲಸೋಲ ಮಾಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಹಣ ಕಟ್ಟಿದ 15 ಸಾವಿರ ಜನರಲ್ಲಿ ವಿಮೆ ಬಂದಿರೋದು ಕೇವಲ 4 ಸಾವಿರ ಮಂದಿಗೆ ಉಳಿದ ಹಣ ಏನಾಯ್ತು..? ಆ ರೈತರ ಜಮೀನಿಗೆ ಮಾತ್ರ ಮಳೆ ಸುರಿದಿದೆಯೇ..? ಫಸಲ್ ವಿಮೆ ಯೋಜನೆಯಲ್ಲಿ ಹಣ ಬರದೆ ಬರದ ಗಾಯದಿಂದ ಕಷ್ಟಪಡುತ್ತಿದ್ದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಟಿ.ವೆಂಕಟರಮಣಯ್ಯ ಬೇಸರ ವ್ಯಕ್ತಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….