ದೊಡ್ಡಬಳ್ಳಾಪುರ, (ಜೂ.19); ಉತ್ತಮ ಉದ್ದೇಶ ಹೊಂದಿರುವ ಫಸಲ್ ವಿಮೆ ಯೋಜನೆ, ಇತ್ತೀಚೆಗೆ ರೈತರ ಸುಲಿಗೆ ಮಾಡಿ ಖಾಸಗಿ ಕಂಪನಿಗಳ ಖಜಾನೆ ತುಂಬಿಸುವ ಯೋಜನೆಯಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಸಲ್ ವಿಮೆ ಯೋಜನೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ಉಂಟಾಗಿರುವ ಭಾರೀ ಮೋಸದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಭೀಕರ ಬರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ನಂಬಿಕೆಯಿಂದ ತಾಲೂಕಿನ ಜನತೆ ಸಾಲಸೋಲ ಮಾಡಿ ರಾಗಿ ಬೆಳೆಗೆ ಸಾವಿರಾರು ಮಂದಿ ಇನ್ಶ್ಯೂರೆನ್ಸ್ ಮಾಡಿಸಿದ್ದಾರೆ. ಆದರೆ ವಿಮೆ ಕಂಪನಿಗಳು ರೈತರಿಗೆ ಈ ರೀತಿ ಮೋಸ ಮಾಡುವ ಮೂಲಕ ಮೋದಿ ಅವರ ಹೆಸರಿಗೆ ಮಸಿಬಳಿಯುವ ಪ್ರಯತ್ನ ಮಾಡುತ್ತಿವೆ.
ತಾಲೂಕಿನ 15546 ರೈತರು ರಾಗಿ ಬೆಳೆಗೆ ಫಸಲ್ ವಿಮೆಗೆ ಹಣ ಕಟ್ಟಿದ್ದು, ಬರ ಪೀಡಿತ ತಾಲೂಕೆಂದು ಘೋಷಣೆಯಾಗಿದ್ದರು ಕೂಡ ಕೇವಲ 4111ಮಂದಿಗೆ ಮಾತ್ರ ಪರಿಹಾರ ದೊರೆತಿದೆ ಎಂದರೆ ಇದು ರೈತರಿಂದ ಮಾಡಲಾಗಿರುವ ಹಗಲು ದರೋಡೆ ಎನ್ನಬಹುದಾಗಿದೆ.
ಇಂತಹ ಪ್ರಕರಣಗಳಿಂದ ಮೋದಿ ಸರಕಾರದ ಮೇಲೆ ಜನಸಾಮಾನ್ಯರಲ್ಲಿ ಬೇಸರಕ್ಕೆ ಕಾರಣವಾಗುತ್ತದೆ. ನಾವು ಮೈತ್ರಿಯಲ್ಲಿರಬಹುದು ಆದರೆ. ತಾಲೂಕಿನ ರೈತರ ಹಿತವನ್ನು ಬಲಿಕೊಡಲು ಸಾಧ್ಯವಿಲ್ಲ.
ಈ ಕುರಿತು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….