ಹೈದರಾಬಾದ್, (ಜೂ08): ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ ನಸುಕಿನ ಜಾವ ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ.
ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದ ಕೃಷಿ ಕುಟುಂಬದಲ್ಲಿ ನವೆಂಬರ್ 16, 1936 ರಂದು ಜನಿಸಿದ ಅವರು, ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು.
ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ.
ಭಾರತ ಮಾಧ್ಯಮ ಲೋಕದಲ್ಲಿ ದೂರದೃಷ್ಟಿ ಹೊಂದಿದ್ದ ರಾಮೋಜಿ ರಾವ್ ಅವರ ನಿಧನ ತೀವ್ರ ದುಃಖವನ್ನುಂಟುಮಾಡಿದೆ. ಅವರ ಶ್ರೀಮಂತ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರಗಳ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….