ದೆಹಲಿ, (ಜೂ.08): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ರ ಗಡಿದಾಟಿ, ಇಂಡಿಯಾ ಕಳಪೆ ಸಾಧನೆ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದ ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್, ಫಲಿತಾಂಶ ದಲ್ಲಿ ತಮ್ಮ ಲೆಕ್ಕಾಚಾರ ತಲೆಕೆಳಗಾಗಿದ್ದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ತಾವು ಚುನಾವಣಾ ಭವಿಷ್ಯ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾ ವಣೆಯ ಫಲಿತಾಂಶ ಹೊರಬಿದ್ದ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ಕಿಶೋರ್, ಈ ಬಾರಿ ತಮ್ಮ ಲೆಕ್ಕಾಚಾರದಲ್ಲಿ ತಪ್ಪಾಗಿದೆ ಎಂಬುದನ್ನು ಅಂಗೀಕರಿಸಿದರು.
ತಮ್ಮಂತಹ ಅನೇಕ ಸಮೀಕ್ಷರು ನುಡಿದ ಭವಿಷ್ಯ ಸುಳ್ಳಾಯಿತು. ತಾವು ಹೇಳಿದ್ದರ ಬಗ್ಗೆ ವಿನಮ್ರವಾಗಿ ಆತ್ಮನಿರೀಕ್ಷೆ ಮಾಡಿಕೊಳ್ಳುತ್ತೇನೆ ಎಂದ ಅವರು, ಭವಿಷ್ಯದಲ್ಲಿ ಯಾವುದೇ ಪಕ್ಷ ಇಂತಿಷ್ಟೇ ಸ್ಥಾನ ಗಳಿಸುತ್ತದೆ ಎಂಬುದನ್ನು ಹೇಳುವುದಿಲ್ಲ ಎಂದರು.
ಸಮೀಕ್ಷೆ ಉಲ್ಟಾ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 300ರ ಗಡಿದಾಟಲಿದ್ದು, ಪ್ರತಿಪಕ್ಷಗಳ ಒಕ್ಕೂಟ ಹೆಚ್ಚಿನ ಸಾಧನೆ ಮಾಡದು. ವಿಶೇಷವಾಗಿ ಒಡಿಶಾ ಮತ್ತು ಪ. ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿ ದೇಶದ ರಾಜಕೀಯ ಪರಿಸ್ಥಿತಿಯೇ ಬದಲಾಗುತ್ತದೆ.
ಮತ ಎಣಿಕೆ ದಿನ ಆಘಾತಗಳಿಗೆ ಸಿದ್ಧವಾಗಿರಿ ಎಂದು ಕಿಶೋರ್ ಸೂಚ್ಯವಾಗಿ ಇಂಡಿಯಾಗೆ ಎಚ್ಚರಿಕೆ ಕೊಟ್ಟಿದ್ದರು. ಆದರೆ ಫಲಿತಾಂಶ ಪ್ರಕಟಗೊಂಡಾಗ ಬಿಜೆಪಿ 240 ಸ್ಥಾನ ಗಳಿಸಿ ಎನ್ ಡಿಎ 293ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪ್ರಶಾಂತ್ ಕಿಶೋರ್ ಭವಿಷ್ಯ ಸುಳ್ಳುಮಾಡುವಂತೆ ಇಂಡಿಯಾ ಉತ್ತರಪ್ರದೇಶ ಮತ್ತು ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮೇಲುಗೈ ಸಾಧಿಸಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….