ಮುಂಬೈ, (ಜೂ.08); ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನೂತನ ಸಂಸದೆ ಕಂಗನಾ ರನೌತ್, ಅಪರಾಧಿಯೊಬ್ಬ ಬಲವಾದ ಭಾವನಾತ್ಮಕ ಪ್ರಚೋದನೆಯಿಂದ ನೆಲದ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ ಮಾಡುವ ಅಪರಾಧವನ್ನು ನೀವು ಒಪ್ಪಿಕೊಂಡರೆ, ನಿಮ್ಮೊಳಗೆ ನೀವು ಅತ್ಯಾಚಾರ ಅಥವಾ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರ್ಥ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ ಹಾಗೂ ಕಳ್ಳ ತಾನು ಮಾಡುವ ಅಪರಾಧದ ಕೆಲಸಗಳಿಗೆ ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಾರಣಗಳನ್ನು ಹೊಂದಿರುತ್ತಾನೆ. ಕಾರಣವಿಲ್ಲದೇ ಯಾರೂ ಅಪರಾಧ ಮಾಡುವುದಿಲ್ಲ. ಆದರೂ ಅವರನ್ನು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ ಮತ್ತು ಜೈಲಿಗೆ ಹಾಕಲಾಗುತ್ತದೆ.
ಅಪರಾಧಿಯೊಬ್ಬ ಬಲವಾದ ಭಾವನಾತ್ಮಕ ಪ್ರಚೋದನೆಯಿಂದ ನೆಲದ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ ಮಾಡುವ ಅಪರಾಧವನ್ನು ನೀವು ಒಪ್ಪಿಕೊಂಡರೆ, ಅನುಮತಿಯಿಲ್ಲದೆ ಯಾರೋ ಒಬ್ಬರ ಖಾಸಗಿ ಬದುಕಿನಲ್ಲಿ ಪ್ರವೇಶಿಸುವುದು ನಿಮಗೆ ಸರಿ ಎನಿಸಿದರೆ, ಒಪ್ಪಿಗೆಯಿಲ್ಲದೆ ಅವರ ದೇಹದ ಭಾಗಗಳನ್ನು ಮುಟ್ಟುವುದು ಅಥವಾ ಹಲ್ಲೆ ಮಾಡುವುದರಲ್ಲಿ ನಿಮಗೆ ತಪ್ಪು ಕಾಣಿಸದಿದ್ದರೆ ನಿಮ್ಮೊಳಗೆ ನೀವು ಅತ್ಯಾಚಾರ ಅಥವಾ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರ್ಥ ಎಂದು ಹೇಳಿದ್ದಾರೆ.
ಮಾನಸಿಕವಾಗಿ ನಿಮಗಿರುವ ಅಪರಾಧ ಪ್ರವೃತ್ತಿಯ ಬಗ್ಗೆ ನೀವು ಯೋಚಿಸಬೇಕಾಗಿದೆ. ದಯವಿಟ್ಟು ಯೋಗ ಮತ್ತು ಧ್ಯಾನವನ್ನು ಮಾಡಿ. ಇಲ್ಲದಿದ್ದರೆ ಜೀವನವು ಹೊರೆಯಾಗುವುದರ ಜೊತೆಗೆ ಕಹಿಯ ಅನುಭವವನ್ನು ನೀಡುತ್ತದೆ. ತುಂಬಾ ದ್ವೇಷ-ಅಸೂಯೆ ಹೊಂದುವುದನ್ನು ಬಿಟ್ಟುಬಿಡಿ. ದಯವಿಟ್ಟು ನಿಮ್ಮನ್ನು ನೀವು ಮುಕ್ತಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿಯೊಬ್ಬರು ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಘಟನೆ ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕೆಲಸದಿಂದ ಅಮಾನತು ಮಾಡಲಾಗಿದೆ.
ಈ ಪ್ರಕರಣವನ್ನು ಹಲವರು ಖಂಡಿಸಿದ್ದರೆ, ಇನ್ನು ಕೆಲವರು ರೈತರ ಪ್ರತಿಭಟನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿ, ಪ್ರತಿಭಟನೆ ನಡೆಸಲು ಮುಂದಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….