ದೊಡ್ಡಬಳ್ಳಾಪುರ, (ಜೂ.01); ರಸ್ತೆ ವಿಚಾರವಾಗಿ ಆರಂಭವಾಗಿದ್ದ ಸಂಬಂಧಿಕರ ನಡುವೆ ಉಂಟಾಗಿದ್ದ ಕಲಹ ದೊಡ್ಡಬೆಳವಂಗಲ ಪೊಲೀಸರು ಹಾಗೂ ರೈತ ಸಂಘದ ಮುಖಂಡರು ನಡೆಸಿದ ಕಟ್ಟೆ ಪಂಚಾಯಿತಿಯಿಂದಾಗಿ ಒಂದಾಗಿ ಬಾಳುವುದಾಗಿ ಬಾವ – ಬಾಮೈದ ಪ್ರಮಾಣ ಮಾಡಿರುವ ಘಟನೆ ತಾಲೂಕಿನ ಗಾಣದಾಳು ಗ್ರಾಮದಲ್ಲಿ ನಡೆದಿದೆ.
ದೂರು – ಪ್ರತಿ ದೂರಿನ ಮೂಲಕ ನ್ಯಾಯಲಯದ ಬಾಗಿಲಿಲು ತಟ್ಟುವ ಪರಿಸ್ಥಿತಿಯಲ್ಲಿದ್ದ ಬಾವ – ಬಾಮೈದ ನಡುವಿನ ಕಲಹಕ್ಕೆ ಪೊಲೀಸರು, ರೈತ ಸಂಘದವರು ಸಂಧಾನ ನಡೆಸಿ, ಮುಂದೆ ಬೆಳೆಯುತ್ತಲೇ ಹೋಗುತ್ತಿದ್ದ ಕಲಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಣದಾಳು ಗ್ರಾಮದಲ್ಲಿ ಬಾವ – ಬಾಮೈದರಾದ ಮಂಜುನಾಥ ಮತ್ತು ಶಂಕರ್ ನಡುವೆ ರಸ್ತೆ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು. ಇದರ ನಡುವೆ ಶಂಕರ ಅವರು ತೋಟ ಮಾಡಿಕೊಂಡಿದ್ದ 53 ಅಡಕೆ ಗಿಡಗಳನ್ನು ಅಪರಿಚಿತ ದುಷ್ಕರ್ಮಿಗಳು ಕತ್ತರಿಸಿಹಾಕಿದ್ದರು.
ಇದು ಮಂಜುನಾಥ್ ಮಾಡಿರುವ ಕೃತ್ಯವೆಂದು ಶಂಕರ ದೂರು ನೀಡಿದರೆ, ಶಂಕರ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಂಜುನಾಥ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು.
ಕೇವಲ ರಸ್ತೆ ವಿಚಾರವಾಗಿ ಆರಂಭವಾದ ಬಾವ – ಬಾಮೈದ ನಡುವಿನ ಕಲಹ ತೀವ್ರ ಸ್ವರೂಪ ಪಡೆಯುತ್ತಿದ್ದು, ಈ ವಿಚಾರ ತಿಳಿದ ದೊಡ್ಡಬೆಳವಂಗಲ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್, ರೈತ ಸಂಘದ ಪದಾಧಿಕಾರಿಗಳೊಂದಿಗೆ ಗಾಣದಾಳು ಗ್ರಾಮಕ್ಕೆ ತೆರಳಿ ಮಂಜುನಾಥ ಮತ್ತು ಶಂಕರ್ ಅವರ ಜೊತೆ ಈ ಹಿಂದಿನ ಕಾಲದಂತೆ ಕಟ್ಟೆ ನ್ಯಾಯ ಪಂಚಾಯಿತಿ ಮಾಡಿಸಿದರು.
ಈ ವೇಳೆ ಶಂಕರನ ತೆಂಗಿನ ಗಿಡಗಳನ್ನು ಕತ್ತರಿಸಿಲ್ಲ ಎಂದು ಮಂಜುನಾಥ್ ದೇವರ ಮೇಲೆ ಪ್ರಮಾಣ ಮಾಡಿದರು. ಇದರಿಂದಾಗಿ ಶಂಕರನಲ್ಲಿದ್ದ ಸಂದೇಹ ದೂರಾದಂತೆ ಕಂಡು ಬಂತು. ನಂತರ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಅವರು ದ್ವೇಷದಿಂದ ಉಂಟಾಗುತ್ತಿರುವ ಅವಾಂತರಗಳ ಕುರಿತು ವಿವರಿಸಿ, ಕೆಲ ಸಂದೇಶಗಳನ್ನು ಹೇಳಿ, ದ್ವೇಷ, ಕೋಪ, ಅಸೂಯೆ ತೊರೆದು ಶಾಂತಿ ಸಹಬಾಳ್ವೆಯಿಂದ ಜೀವನ ಮಾಡುವಂತೆ ಸಲಹೆ ನೀಡಿದರು.
ಇದಕ್ಕೆ ಸಾಥ್ ನೀಡಿದ ಸ್ಥಳೀಯ ರೈತ ಸಂಘದ ಮುಖಂಡರೂ ಕೂಡ ಸಹೋದರರಿಗೆ ತಿಳಿಹೇಳಿ ಸಹಬಾಳ್ವೆಯ ಪಾಠ ಮಾಡಿದರು. ಬುದ್ದಿ ಮಾತಿಗೆ ಸಮ್ಮತಿ ಸೂಚಿಸಿದ ಬಾವ – ಬಾಮೈದ ಪರಸ್ಪರ ಕೈಕುಲುಕಿ ಅನೋನ್ಯವಾಗಿ ಜೀವನ ನಡೆಸುವ ವಾಗ್ದಾನ ಮಾಡಿದರು.
ಇದೇ ವೇಳೆ ನಾಶವಾಗಿದ್ದ ಶಂಕರನ ಗಿಡಗಳ ಜಾಗದಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಪೊಲೀಸರು, ರೈತ ಸಂಘದವರು, ಶಂಕರಿಗೆ ಆಗಿದ್ದ ಸಮಯ, ಹಣದ ನಷ್ಟವನ್ನು ಬರಿಸುವ ಪ್ರಯತ್ನ ಮಾಡಿ ಪ್ರಶಂಸಗೆ ಪಾತ್ರರಾದರು.
ಒಟ್ಟಾರೆ ಪೊಲೀಸ್ ಠಾಣೆ ಮೆಟ್ಟಿಲೇರಿ ಕೋರ್ಟು, ಕಚೇರಿ ಅಲೆಯ ಬೇಕಾಗಿದ್ದ ಬಾವ – ಬಾಮೈದರಿಬ್ಬರು ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಹಾಗೂ ರೈತ ಸಂಘದ ಕಾಳಜಿಯಿಂದ ಅನೋನ್ಯವಾಗಿ ಬಾಳುವಂತಾಗಿದ್ದು ಪ್ರಶಂಸೆಗೆ ಕಾರಣವಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….