ಧಾರವಾಡ, (ಮೇ.25); ಸಾರಿಗೆ ಬಸ್‍ನಲ್ಲಿ ಚಾಲಕ ಛತ್ರಿ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
ಮನರಂಜನೆಯ ಉದ್ದೇಶಕ್ಕಾಗಿ ಚಾಲಕ ಬಸ್‍ನಲ್ಲಿ ಛತ್ರಿ ಹಿಡಿದು ರೀಲ್ಸ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿರುವ ಸಚಿವರು, ಈ ವಿಚಾರದಲ್ಲಿ ರಾಜ್ಯ ಬಿಜೆಪಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ರಾಮಲಿಂಗಾ ರೆಡ್ಡಿ, ಕೆಲವರಿಗೆ ಕಣ್ಣಿರುತ್ತದೆ ಆದರೆ ನೋಡಲು ಸಾಧ್ಯವಾಗದ ಸ್ಥಿತಿ, ತಲೆ ಇರುತ್ತದೆ ಬುದ್ದಿಯನ್ನು ಸರಿಯಾಗಿ ಉಪಯೋಗಿಸಲಾಗದ ಪರಿಸ್ಥಿತಿ. ಇವೆಲ್ಲವೂ ಯತ್ನಾಳ್, ಆರ್.ಅಶೋಕ್ ಹಾಗೂ ಸಿ.ಎಸ್.ಅಶ್ವತ್ಥ್ ನಾರಾಯಣಗೆ ಅನ್ವಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ಮೇ.23ರಂದು ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಹನುಮಂತಪ್ಪ ಕಿಲ್ಲೇದಾರ ಹಾಗೂ ನಿರ್ವಾಹಕರಾಗಿ ಅನಿತಾ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಳೆ ಬರುತ್ತಿದ್ದ ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದುದರಿಂದ ಚಾಲಕ ಮನೋರಂಜನೆಗಾಗಿ ನಿರ್ವಾಹಕರ ಕೊಡೆ ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ.
ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ.
ಸದರಿ ವಾಹನವನ್ನು ವಿಭಾಗದ ತಾಂತ್ರಿಕ ತಜ್ಞರು ಪರಿಶೀಲನೆ ಮಾಡಿದ್ದು, ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಂಡಿರುತ್ತಾರೆ. ಈ ರೀತಿಯ ಬೇಜವಾಬ್ದಾರಿತನದಿಂದ ವರ್ತಿಸಿ, ಸಂಸ್ಥೆಯ ಘನತೆಗೆ ಧಕ್ಮೆ ತಂದ ಚಾಲನಾ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ನಾಯಕರು ಕಣ್ಣು, ತಲೆ ಯಾವುದೂ ಸರಿಯಾಗಿ ಕನೆಕ್ಟ್ ಆಗದೆ ಇರೋ ಪಂಡಿತ ಪುತ್ರರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಈ ವಿಡಿಯೋ ನೋಡಿದರೆ ಚಾಲಕ ಹಿಡಿದಿರುವ ಕೊಡೆ ಮೇಲೆ ಒಂದೇ ಒಂದು ಹನಿ ನೀರು ಕಾಣುತ್ತಿಲ್ಲ. ಅದನ್ನು ನೋಡುವ, ಯೋಚಿಸುವ ವ್ಯವಧಾನ, ಬುದ್ದಿಯಾದರೂ ಬೇಡವೇ ಇವರಿಗೆ? ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.
ಬಿಜೆಪಿ ಅವಧಿಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ಸಾಲದ ಸುಳಿಯಲ್ಲಿ ಮುಳುಗಿಸಿ ಹೋಗಿರುವ ಕೀರ್ತಿವಂತರು ಇವರು. ಅವರ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ.
ಡಕೋಟ ಬಸ್ಸುಗಳನ್ನು ಕಲ್ಪಿಸಿರುವ ಸಾಧನೆ ಬಿಜೆಪಿಯವರದ್ದೆ. ನೇಮಕಾತಿಯಂತೂ ಮರೀಚಿಕೆಯೇ ಸರಿ.. ನಮ್ಮ ಅವಧಿಯಲ್ಲಿ ಹೊರಡಿಸಿದ್ದ ನೇಮಕಾತಿ ಪ್ರಕಟಣೆಗೂ ತಡೆ ನೀಡಿದ್ದ ಕೀರ್ತಿ ಬಿಜೆಪಿ ಅವರಿಗೆ ಸಲ್ಲಬೇಕು. ನಮ್ಮ ಸರ್ಕಾರ ಬಂದೊಡನೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿ, ಪೂರ್ವಾಪರ ಚಿಂತಿಸದೆ ರೀಲ್ಸ್ ವಿಡಿಯೋ ಶೇರ್ ಮಾಡಿ ಹರಿಹಾಯ್ದಿದ್ದ ಬಿಜೆಪಿ ನಾಯಕರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೋಲು ಕೊಟ್ಟು ಬಡಿಸಿಕೊಂಡಂತಾಗಿದ್ದು ಮಾತ್ರ ವಿಪರ್ಯಾಸ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….