ಬೆಂಗಳೂರು, (ಮೇ.22); ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ದ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮತ್ತೊಂದು ಎಫ್‌ಐಆರ್ ದಾಖಲು ಮಾಡಲಾಗಿದೆ.
ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೂ ತಡೆ ಆರೋಪ ಹಿನ್ನೆಲೆ ಐಪಿಸಿ 143, 147, 341, 504, 506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲು ಮಾಡಲಾಗಿದೆ.
ಮೇ.20ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದಿದ್ದ ಪ್ರತಿಭಟನೆ ವೇಳೆ, ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧ. ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ ಆರೋಪ ಹಿನ್ನೆಲೆ ಎಫ್‌ಐಆರ್ ದಾಖಲಿಸಲಾಗಿದೆ.
ಈ ಕುರಿತು ಕಿಡಿಕಾರಿರುವ ಕಾಂಗ್ರೆಸ್ ಸರಣಿ ಟ್ವಿಟ್ ಮಾಡಿದ್ದು, ಪೊಲೀಸರ ಮೇಲೆ ದೌರ್ಜನ್ಯ ಎಸಗುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಬಿಜೆಪಿಯ ರೌಡಿ ಮೋರ್ಚಾದ ಅಧ್ಯಕ್ಷಗಿರಿಗೆ ಪೈಪೋಟಿ ನಡೆಸಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಯಾರು ಹೆಚ್ಚು ಹಲ್ಲೆ, ಕೊಲೆ, ದೌರ್ಜನ್ಯ ಎಸಗುತ್ತಾರೋ ಅವರಿಗೆ ಬಿಜೆಪಿಯಲ್ಲಿ ಹೆಚ್ಚು ಮನ್ನಣೆಯಲ್ಲವೇ? ಎಂದು ಕಿಚಾಯಿಸಿದೆ.
ಬೆಳ್ತಂಗಡಿಯ ಬಿಜೆಪಿ ಶಾಸಕ ಪೊಲೀಸರ ಕಾಲರ್ ಹಿಡಿದು ಎಳೆದು ಹಾಕುತ್ತಾರಂತೆ ಅಕ್ರಮ ದಂಧೆಕೋರರು, ಕ್ರಿಮಿನಲ್ ಗಳು, ಸಮಾಜಘಾತುಕರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದರೆ ಬಿಜೆಪಿ ಪಕ್ಷದವರಿಗೆ ಯಾಕಿಷ್ಟು ಉರಿ?
ಒಂದೆಡೆ ಕರ್ತವ್ಯ ನಿಭಾಯಿಸುವ ಪೊಲೀಸರ ಸ್ಥೈರ್ಯವನ್ನು ಉಡುಗಿಸುವ ಕೆಲಸ ಮಾಡುವ ಬಿಜೆಪಿ ಮತ್ತೊಂದೆಡೆ ಕಾನೂನು ಸುವ್ಯವಸ್ಥೆಯ ಬಗ್ಗೆ ಬೊಬ್ಬೆ ಹಾಕುತ್ತದೆ.
ಆರ್.ಅಶೋಕ ಅವರೇ, ನಿಮ್ಮ ರೌಡಿ ಎಂಎಲ್ಎ ಮಾಡಿದ ದೌರ್ಜನ್ಯದ ಬಗ್ಗೆ ಮಾತಾಡುವುದು ಯಾವಾಗ? ಎಂದಿರುವ ಕಾಂಗ್ರೆಸ್, ಇಂತಹ ಗೂಂಡಾಗಿರಿ, ದಾದಾಗಿರಿ ನಡೆಸಿದ್ದರಿಂದಲೇ ರಾಜ್ಯದ ಜನ ಬಿಜೆಪಿಯ ಕಾಲರ್ ಹಿಡಿದು ಹೊರಗಟ್ಟಿದ್ದಾರೆ ಎಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….