ಬೆಂಗಳೂರು, (ಮಾ.27): ಲೋಕಸಭಾ ಚುನಾವಣೆಯ ಟಿಕೆಟ್ ಪೈಪೋಟಿಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಕುರಿತು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಮಲ್ಲೇಶ್ವರಂನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ವರ ಬಂದಾಗ ಆಂಟಿಬಯೋಟಿಕ್ ತೆಗೆದುಕೊಂಡರೂ ವಾಸಿಯಾಗಲು 2-3 ದಿನ ಬೇಕು. ಅದೇ ರೀತಿ ಮಾತು ಕಥೆ ನಡೆಸಿದರೂ ಸಹ ಬಂಡಾಯ ಶಮನವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಬೀದರ್‌ಗೆ ಹೋಗಿದ್ದೇನೆ. ಅಲ್ಲಿನ ಬಂಡಾಯ ಶಮನಗೊಳಿಸಿದ್ದೇನೆ. ತುಮಕೂರಿಗೂ ನಾನು ಹೋಗಿದ್ದೇನೆ.
ಯಡಿಯೂರಪ್ಪ ಅವರು ಮಾಧುಸ್ವಾಮಿ ಅವರೊಂದಿಗೆ ಸಮಾಧಾನವಾಗಿ ಮಾತುಕಥೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರದ ಸಮಸ್ಯೆ ಕೂಡ ಕೂಡ ಶೀಘ್ರದಲ್ಲಿಯೇ ಸರಿ ಹೋಗುತ್ತದೆ ಎಂದು ಆರ್.ಅಶೋಕ್ ಹೇಳಿದರು.
ಜೊತೆಗೆ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಳಿತು ಮಾತನ್ನಾಡುತ್ತಾರೆ. ಎಲ್ಲಾ ವಿವಾದಗಳೂ ಸಹ ಇನ್ನು ಎರಡೂರು ದಿನಗಳಲ್ಲಿ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳರ್ ಅವರು ಚುನಾವಣಾ ಕಣದಲ್ಲಿದ್ದಾರೆ. ಇವರ ಪತಿ ಹೇಮಂತ್ ನಿಂಬಾಳ್ಳರ್ ಅವರು ವಾರ್ತಾ ಇಲಾಖೆಯ ಆಯುಕ್ತರಾಗಿ ಕರ್ತವ್ಯದಲ್ಲಿದ್ದಾರೆ.
ಹೀಗಾಗಿ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ಅನುಮಾನ. ಆದ್ದರಿಂದ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಿಷ್ಪಕ್ಷಪಾತ ಚುನಾವಣೆ ನಡೆಯಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….