ಮಂಗಳೂರು, (ಮಾ.9): ರಾಜ್ಯದ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿಯಿದ್ದರೆ ಮೊದಲು ದೆಹಲಿಗೆ ಹೋಗಿ ನಾಯಕರ ಮನವೋಲಿಸಿ ಅನುದಾನ ತರಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ
ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಆರ್.ಅಶೋಕ ಅವರಿಗೆ ತಿರುಗೇಟು ನೀಡಿರುವ ಅವರು, ಸೆಪ್ಟೆಂಬರ್ ತಿಂಗಳಿನಲ್ಲಿ ಬರಪರಿಹಾರಕ್ಕೆ ಅನುದಾನ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಮನವಿ ಕೊಟ್ಟು ಆರು ತಿಂಗಳಾದರೂ ಕೇಂದ್ರ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ರೈತರಿಗೆ ರಾಜ್ಯ ಸರ್ಕಾರನೇ ಪರಿಹಾರ ನೀಡಿದೆ. ಅಂತಿಮ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದರು.
ಕರ್ನಾಟಕ ಇಷ್ಟೆಲ್ಲಾ ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ನನಗೇನು ಸಂಬಂಧ ಇಲ್ಲ ಎಂಬಂತಿದೆ. ಬೇಜವಬ್ದಾರಿತನದಿಂದ ವರ್ತಿಸುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿಯಿದ್ದರೆ ಮೊದಲು ದೆಹಲಿಗೆ ಹೋಗಲಿ. ಕೇಂದ್ರ ಸಚಿವರು, ಪ್ರಧಾನಿಯವರ ಜೊತೆ ಕೂತು ಮಾತನಾಡಲಿ. ಕರ್ನಾಟಕಕ್ಕೆ ಬರಬೇಕಾದ ಹಣವನ್ನು ಮೊದಲು ಕೊಡಿಸಲಿ. ಅದು ಬಿಟ್ಟು ಸುಮ್ಮನೆ ಪ್ರಚಾರಕ್ಕಾಗಿ ಹೇಳಿಕೆ ಕೊಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.
ಕರ್ನಾಟಕಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಏನು ಮಾತನಾಡುತ್ತಿಲ್ಲ. ರಾಜ್ಯದ ಬಿಜೆಪಿ ನಾಯಕರೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಏನೇ ಅನ್ಯಾಯ ಮಾಡಿದರೂ ಬಾಯಿ ಬಿಡುತ್ತಿಲ್ಲ. ಸಮರ್ಥನೆ ಮಾಡಿಕೊಂಡು ಅನ್ಯಾಯ ಮುಂದುವರಿಸಿಲು ಪ್ರತ್ಯಕ್ಷವಾಗಿ ಕಾರಣರಾಗಿದ್ದಾರೆ. ಬರಬೇಕಾದ ಹಣವನ್ನು ಕೇಂದ್ರದಿಂದ ಬಾಯಿಬಿಟ್ಟು ಕೇಳಲಿ. ಅದನ್ನು ಕೇಳದೆ ರಾಜ್ಯದ ಜನರಿಗೆ ಇಲ್ಲಿನ ಬಿಜೆಪಿ ನಾಯಕರು ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಬರಗಾಲ ಸವಾಲಿನ ಸನ್ನಿವೇಶ. ಇದನ್ನು ಎದುರಿಸುವ ಎಲ್ಲಾ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ರಾಜ್ಯದ 223 ತಾಲೂಕುಗಳಲ್ಲಿ ಬರ ಘೋಷಣೆ ಆಗಿದೆ. ರಾಜ್ಯಾದ್ಯಂತ 675 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೈವೇಟ್ ಟ್ಯಾಂಕರ್ ಹಾಗೂ ಖಾಸಗಿ ಬೋರ್ ವೆಲ್ಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡುತ್ತಿದ್ದೇವೆ ಎಂದರು.
4000 ಬೋರ್ ವೆಲ್ಗಳ ಬಾಡಿಗೆಗೆ ಒಪ್ಪಂದ ಮಾಡಿದ್ದೇವೆ. ಬೆಂಗಳೂರಿನಲ್ಲಿಯೂ ವಾಡಿಕೆಗಿಂತ ಹೆಚ್ಚು ಸಮಸ್ಯೆ ಕಂಡುಬಂದಿದೆ. ಬಿಬಿಎಂಪಿ ಜೊತೆ ಸಭೆ ಮಾಡಿ ಬೇಕಾದ ಹಣ ಕೊಡುವ ಕೆಲಸ ಮಾಡುತ್ತಿದ್ದೇವೆ. ಸಮಸ್ಯೆ ನಿಭಾಯಿಸಲು ಸರ್ಕಾರ ತೀವ್ರವಾದ ಹೆಜ್ಜೆ ಇಟ್ಟಿದೆ. ಖಾಸಗಿ ಟ್ಯಾಂಕರ್ಗಳಿಗೆ ಸರ್ಕಾರ ದರ ನಿಗದಿ ಮಾಡಿದೆ. ನೀರಿನ ಸಮಸ್ಯೆ ಎದುರಿಸಲು ಹಿಂದೆ ಮಾಡದೇ ಇರುವ ಪ್ರಯತ್ನವನ್ನು ಈ ಬಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….