ಬಸವ ಕಲ್ಯಾಣ, (ಮಾ.7): ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕಙ್ನಾಗಿ ಘೋಷಿಸಿದೆವು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶ ಸಮುದಾಯದಿಂದ ಅಭೂತಪೂರ್ವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣರ ಗುರಿಯಾಗಿತ್ತು. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಇಂದು, ನಾಳೆ ಮಾತ್ರವಲ್ಲ ಯಾವತ್ತೂ ಶಾಶ್ವತ ಎಂದರು.
ಇಡಿ ಜಗತ್ತಿಗೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದು ಬಸವಾದಿ ಶರಣರು. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇರುವ ಮೌಲ್ಯಗಳಲ್ಲೆವೂ ಬಸವಾದಿ ಶರಣರ ಆಶಯಗಳಲ್ಲಿವೆ ಎಂದು ವಿವರಿಸಿದರು.
ಕಾಯಕ, ಉತ್ಪಾದನೆ, ದಾಸೋಹ ಬಸವಾದಿ ಶರಣರ ಆಶಯ. ಈ ಮೂಲಕ ಸಮಬಾಳು, ಸಮಪಾಲು ಎನ್ನುವುದನ್ನು 12 ನೇ ಶತಮಾನದಲ್ಲೇ ಸಾರಿದ್ದಾರೆ ಎಂದರು.
ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ಸ್ಫೂರ್ತಿ ಆಗಿರುವುದರಿಂದ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣರ ಭಾವಚಿತ್ರ ಕಡ್ಡಾಯಗೊಳಿಸಿದೆ.
ಲಕ್ಷಾಂತರ ಕನ್ನಡಿಗರ ಸಾಕ್ಷಿಯಾಗಿ ನಾನು ಬಸವ ಜಯಂತಿಯಂದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ ಎಂದರು.
ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ಇವತ್ತಿನ ವಿದ್ಯಾವಂತರು ಕಂದಾಚಾರಗಳನ್ನು ಆಚರಿಸುತ್ತಿದ್ದಾರೆ. ಆತ್ಮಸಾಕ್ಷಿ ವಿರುದ್ಧವಾಗಿ ನಡೆದುಕೊಳ್ಳಬಾರದು ಎನ್ನುವುದು ವಚನಗಳ ಆಶಯ. ಎಲವೋ ಎಂದರೆ ನರಕ. ಅಯ್ಯಾ ಎಂದರೆ ಸ್ವರ್ಗ ಎಂದು ಶರಣರು ಹೇಳಿದ್ದಾರೆ. ದಯೆಯೆ ಇಲ್ಲದ ಧರ್ಮ ಯಾವುದಯ್ಯ ಎನ್ನುವ ಮೂಲಕ ನಿಜವಾದ ಧರ್ಮ ಎಂದರೆ ಏನು ಎನ್ನುವುದನ್ನು ತಿಳಿಸಿದ್ದಾರೆ.
ಶರಣರು ಸಂಸ್ಕೃತವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೊದಲ ಬಾರಿಗೆ ಜನರ ಭಾಷೆಯಲ್ಲಿ, ಜನರಾಡುವ ಭಾಷೆಯಲ್ಲಿ ಧರ್ಮದ ಮೌಲ್ಯಗಳನ್ನು ಸಾರಿದರು. ದಯೆಯೆ ಧರ್ಮದ ಮೂಲ ಎನ್ನುವ ಮಾತು ಎಷ್ಟು ಸರಳವಾಗಿದೆ. ಇದೇ ಜನರ ಭಾಷೆ ಎಂದರು.
ಬಸವಾದಿ ಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಇದೇ ನಮ್ಮ ಸರ್ಕಾರಕ್ಕೆ ಮಾದರಿ. ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಈಡೇರಿಸಿ, ನಿಮ್ಮ ಮತಕ್ಕೆ ಗೌರವ ನೀಡಿ ಮತ್ತೆ ನಿಮ್ಮ ಮುಂದೆ ಬಂದು ನಿಂತಿದ್ದೇವೆ ಎಂದರು.
ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ – ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿಗಳಿಗೆ ಸನ್ಮಾನಿಸಲಾಯಿತು.
ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ , ಜಗದ್ಗುರು ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು, ಜಗದ್ಗುರು ಡಾ.ಮಾತೆ ಗಂಗಾದೇವಿ, ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಷ.ಬ್ರ.ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿ 160 ಮಂದಿ ಶರಣ ಗುರುಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಬಸವಕಲ್ಯಾಣ ಅನುಭವ ಮಂಟಪದ ವಿಶ್ವ ಬಸವ ಧರ್ಮ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ನಾಡೋಜ ಡಾ|| ಬಸವಲಿಂಗ ಪಟ್ಟದೇವರು ಮತ್ತು 150 ಕ್ಕೂ ಹೆಚ್ಚು ಶರಣಗುರುಗಳು, ಸ್ವಾಮೀಜಿಗಳು ಉಪಸ್ಥಿತರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹರಸಿದರು.
ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.
ವಿಶ್ವಬಸವ ಧರ್ಮ ಟ್ರಸ್ಟ್‌ನ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ವೈಭವದ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಸನ್ಮಾನಿಸಲ್ಪಟ್ಟರು.
ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ: ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಘೋಷಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳಾದಈಶ್ವರ್ ಖಂಡ್ರೆ ಅವರು ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಡಾ.ಗೊ.ರು.ಚನ್ನಬಸಪ್ಪ, ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ , ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಪೌರಾಡಳಿತ, ಹಜ್ ಸಚಿವರಾದ ಶ್ರೀ ರಹೀಖಾನ್, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ವಿಜಯ್ ಸಿಂಗ್, ಶಾಸಕ ಚನ್ನಾರೆಡ್ಡಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….