ಬೆಂಗಳೂರು, (ಫೆ.14), ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಗುಪ್ತಚರ ದಳ ಹಾಗೂ ಪೊಲೀಸ್ ಇಲಾಖೆಯಿಂದ ಕಾನೂನು ಕಾಪಾಡುವ ಕೆಲಸ ನಡೆಯುತ್ತಿಲ್ಲ. ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಮಾತನಾಡಿದ ಅವರು, ಮಾಜಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಬೆದರಿಕೆ ಬಂದಿರುವುದು ಕಾನೂನು ಅವ್ಯವಸ್ಥೆಗೆ ಉದಾಹರಣೆ. ರಾತ್ರಿ 12 ಗಂಟೆಗೆ ಅವರಿಗೆ ಮಾಜಿ ಕಾರ್ಪೊರೇಟರ್ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಪೊಲೀಸರು ಬಂಧಿಸಿಲ್ಲ. ಕೂಡಲೇ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಇರುವಲ್ಲಿ ಹೂಡಿಕೆ ಹರಿದುಬರುತ್ತದೆ, ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಉದ್ಯೋಗ ಮತ್ತು ಹೂಡಿಕೆಯ ತಾಣವಾಗಿರುವ ಕರ್ನಾಟಕ ಈಗ ಅಪರಾಧದ ನಾಡಾಗಿ ಕುಖ್ಯಾತಿ ಪಡೆಯುತ್ತಿದೆ. NCRB ವರದಿಯ ಪ್ರಕಾರ, ಕಳೆದ ವರ್ಷ *1,80,742 ಪ್ರಕರಣ* ದಾಖಲಾಗಿದೆ. ಇದು ಬಿಜೆಪಿ ಅವಧಿಗಿಂತ ಶೇ.46 ಕ್ಕೂ ಅಧಿಕ. ಹಿರಿಯ ನಾಗರಿಕರ ವಿರುದ್ಧ ನಡೆದ ಅಪರಾಧಿ ಚಟುವಟಿಕೆ 50 ಸಾವಿರದಷ್ಟು ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ. ಬೆಂಗಳೂರು ಈಗ ಅಪರಾಧಗಳ ರಾಜಧಾನಿ, ಸೈಬರ್ ಅಪಾರಾಧಗಳ ಕೇಂದ್ರ ಎಂಬ ಕುಖ್ಯಾತಿಗೆ ಒಳಗಾಗಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ.ನಷ್ಟು ಸೈಬರ್ ವಂಚನೆ ನಡೆದಿದೆ. ಬಿಜೆಪಿ ಅವಧಿಯ 2020-21 ರಲ್ಲಿ 6,422 ಸೈಬರ್ ಅಪರಾಧ ಪ್ರಕರಣ ದಾಖಲಾಗಿತ್ತು. 2023 ರಲ್ಲಿ 17,623 ಪ್ರಕರಣ ದಾಖಲಾಗಿದೆ. ಬೆಂಗಳೂರು ಈಗ ಸೇಫ್ ಸಿಟಿ ಬದಲು ಕ್ರೈ ಸಿಟಿ ಎಂಬ ಹೆಸರು ಪಡೆದಿದೆ. ಕೆಎಫ್ ಡಿ ಮೊದಲಾದ ಸಂಘಟನೆಗಳ ಮೇಲಿದ್ದ ಪ್ರಕರಣ ಹಿಂಪಡೆದಿರುವುದರಿಂದ ದುಷ್ಕರ್ಮಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದರು.
ಸ್ಲೀಪರ್ ಸೆಲ್ ಕೇಂದ್ರ; ಮಹಾಪುರುಷರ ಜಯಂತಿ, ರಾಜಕಾರಣಿಗಳ ಜನ್ಮದಿನದಂದು ಸಾರ್ವಜನಿಕ ಸ್ಥಳದಲ್ಲಿ ಕಟೌಟ್ ಹಾಕುತ್ತಾರೆ. ಆದರೆ ಮೊದಲ ಬಾರಿಗೆ ಕೋಲಾರದಲ್ಲಿ ಸ್ಟೀಲ್ ನಲ್ಲಿ ತಯಾರಿಸಿದ 40 ಅಡಿ ಉದ್ದದ ಲಾಂಗು, ಮಚ್ಚು ಹಾಕಲಾಗಿತ್ತು. ಎನ್ಐಎ ತಂಡ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎಂಟು ಶಂಕಿತ ಉಗ್ರರನ್ನು ಪತ್ತೆ ಮಾಡಿದ್ದು, ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಬಳ್ಳಾರಿಯಲ್ಲಿ ಬಂಧನಕ್ಕೊಳಗಾದ ಮಹಮ್ಮದ್ ಸುಲೇಮಾನ್ ಕಿಂಗ್ ಪಿನ್ ಆಗಿದ್ದ. ಈತ ಅಮಾಯಕರನ್ನು ಧರ್ಮ ಹಾಗೂ ಹಣದ ಆಮಿಷಕ್ಕೊಳಪಡಿಸುವ ತಜ್ಞನಾಗಿದ್ದ. ಬೆಂಗಳೂರಿನ ಪುಲಕೇಶಿನಗರದಲ್ಲೂ ಶಂಕಿತರನ್ನು ಬಂಧಿಸಲಾಗಿದೆ. ಇವರೆಲ್ಲರೂ ಐಸಿಸ್ ಚಿಂತನೆಗಳನ್ನು ಹೊಂದಿರುವವರು. ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದು, ಈಗ ರಾಜ್ಯ ಸ್ಲೀಪರ್ ಸೆಲ್ ಗಳ ಕೇಂದ್ರವಾಗಿದೆ ಎಂದು ತಿಳಿದು ಆತಂಕವಾಗಿದೆ ಎಂದರು.
ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ನಡೆಸಿದಾಗ ಅವರ ಮೇಲೆ ಹಲ್ಲೆಯಾಗಿದೆ. ಗುಪ್ತಚರ ದಳ ಕೆಲಸ ಮಾಡುತ್ತಿದೆಯೋ, ಸತ್ತಿದೆಯೋ ಅಥವಾ ಐಸಿಯುನಲ್ಲಿದೆಯೋ ಎಂದು ಗೊತ್ತಾಗುತ್ತಿಲ್ಲ ಎಂದು ದೂರಿದರು.
ಚಿಕ್ಕಮಗಳೂರಿನಲ್ಲಿ ಗಲಾಟೆಯಾದಾಗ ಪೊಲೀಸರೇ ಪ್ರತಿಭಟನೆಗೆ ಕುಳಿತಿದ್ದರು. ಪೊಲೀಸ್ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ಗುಪ್ತಚರ ದಳಕ್ಕೆ ತಿಳಿಯುತ್ತಿಲ್ಲ. ಪ್ರತಿಭಟನೆ ಮಾಡಿದವರ ವಿರುದ್ಧವೂ ಕ್ರಮ ವಹಿಸಿಲ್ಲ. ವರ್ಗಾವಣೆ ದಂಧೆಯಿಂದಾಗಿ ಪೊಲೀಸರು ನೈತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂದರು.
ವಂಟಮುರಿ ಪ್ರಕರಣ: ಬೆಳಗಾವಿಯ ವಂಟಮುರಿಯಲ್ಲಿ ನಡೆದ ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಇದಕ್ಕೆ ನ್ಯಾಯಾಲಯ ಕೂಡ ಖೇದ ವ್ಯಕ್ತಪಡಿಸಿದೆ. ಈ ಘಟನೆ ಅಧಿವೇಶನದಲ್ಲಿ ಚರ್ಚೆಯೇ ಆಗದಂತೆ ಪೊಲೀಸರು ಮರೆಯಾಗಿಸಿ ಇಟ್ಟಿದ್ದರು. ಮನೆಗೆ ನುಗ್ಗಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಹೊಡೆದರೂ ಅದು ಪೊಲೀಸರಿಗೆ ತಿಳಿಯಲಿಲ್ಲ. ಸಿನಿಮಾದಂತೆಯೇ ಎಲ್ಲ ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಇದು ಕೂಡ ಉಚಿತ ಭಾಗ್ಯವೇ ಎಂದು ಪ್ರಶ್ನಿಸಿದರು.
ಪೊಲೀಸರು ಈ ಪ್ರಕರಣದಲ್ಲಿ 13 ಜನರನ್ನು ಬಂಧಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿರಲಿಲ್ಲ. ಇದು ಸರ್ಕಾರದ ನಡೆಗೆ ಒಂದು ಕನ್ನಡಿ ಎಂದರು.
ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ತೊಳೆಸಲಾಗಿದೆ. ನಾನು ಅಲ್ಲಿಗೆ ಭೇಟಿ ನೀಡಿದ್ದು, ಅಲ್ಲಿಂದ ಅನಿಲ ಹೊರ ಬರುತ್ತಿರುವುದನ್ನು ಗಮನಿಸಿದ್ದೇನೆ. ಆ ವಾಸನೆಗೆ ಯಾರಾದರೂ ಮೂರ್ಛೆ ಹೋಗುತ್ತಾರೆ. ಮಕ್ಕಳ ಕೈಯಲ್ಲಿ ಶಿಕ್ಷಕರು ಆ ಕೆಲಸ ಮಾಡಿಸುವುದರೊಂದಿಗೆ ಕೈಗವಸು ಕೂಡ ನೀಡಲಿಲ್ಲ. 300-400 ವಿದ್ಯಾರ್ಥಿಗಳಿರುವ ಈ ಶಾಲೆಗೆ ಎರಡೂವರೆ ಲೀಟರ್ ಹಾಲು ಮಾತ್ರ ಬರುತ್ತಿದೆ. ಬಿದಿರು ಕಡ್ಡಿ ತರಲು ಮಕ್ಕಳನ್ನೇ ಕಳುಹಿಸುತ್ತಾರೆ. ಇಷ್ಟೆಲ್ಲ ಆದರೂ ಸರ್ಕಾರ ಕೆಲವರನ್ನು ಅಮಾನತು ಮಾಡಿ ಸುಮ್ಮನಾಯಿತು. ಇನ್ನೂ ಎಷ್ಟೋ ಶಾಲೆಗಳಲ್ಲಿ ಇದೇ ರೀತಿ ನಡೆಯುತ್ತಿದೆ ಎಂದರು.
ಬೆಂಗಳೂರಿನ ಆಂದ್ರಹಳ್ಳಿಯ ಶಾಲೆಗೂ ನಾನು ಭೇಟಿ ನೀಡಿದ್ದೆ. ಚಿಕ್ಕಿ, ಮೊಟ್ಟೆ ನೀಡುತ್ತೇವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳುತ್ತಾರೆ. ಆದರೆ ಆ ಶಾಲೆಯಲ್ಲಿ ಚಿಕ್ಕಿ ನೀಡಿ *ಮಕ್ಕಳ ಕೈಯಲ್ಲಿ* ಪ್ರಾಂಶುಪಾಲರು ಶೌಚಾಲಯ ಸ್ವಚ್ಛಗೊಳಿಸುತ್ತಿದ್ದಾರೆ. ಚಿಕ್ಕಿ ಕೊಟ್ಟು ಮಕ್ಕಳ ಕೈಯಲ್ಲಿ ಸ್ವಚ್ಛ ಮಾಡಿಸುವಷ್ಟು ಸರ್ಕಾರ ಪಾಪರ್ ಆಗಿದೆಯೇ ಎಂದು ಪ್ರಶ್ನಿಸಿದರು.
ಚಿಂತಾಮಣಿಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ನಲ್ಲಿ ಊಟದ ಬಗ್ಗೆ ದೂರು ದಾಖಲಾಗಿತ್ತು. ಮಕ್ಕಳು ಪ್ರತಿಭಟಿಸಿದ್ದಕ್ಕೆ ಕೋಪಗೊಂಡ ವಾರ್ಡನ್ ಊಟದಲ್ಲಿ ಮಲ ಬೆರೆಸಿ, 24 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಲಿತ ಸಂಘರ್ಷ ಸಮಿತಿ ಈ ಕುರಿತು ಹೋರಾಟ ನಡೆಸಿದೆ. ನಂತರ ತನಿಖೆ ನಡೆದು ಸಾಬೀತಾಗಿದ್ದರೂ ಏನೂ ಕ್ರಮ ವಹಿಸಿಲ್ಲ. ಅನ್ನ ಬೆಂದಿದೆ ಎಂದು ನೋಡಲು ಒಂದು ಅಗುಳು ಸಾಕು. ಹಾಗೆಯೇ ರಾಜ್ಯದ ಎಲ್ಲ ಸರ್ಕಾರಿ ಹಾಸ್ಟೆಲ್ ಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಊಟದಲ್ಲಿ ಹಣ ಹೊಡೆಯುವವರು ಇದ್ದಾರೆ. ಇದಕ್ಕಾಗಿ ಹಿರಿಯ ಅಧಿಕಾರಿಗಳ ಮೇಲೆ *ಕಠಿಣ ಕ್ರಮ ವಹಿಸಬೇಕು* ಎಂದು ಆಗ್ರಹಿಸಿದರು.
ನೈತಿಕ ಪೊಲೀಸ್‌ಗಿರಿ: ಹಾವೇರಿಯಲ್ಲಿ ಮುಸ್ಲಿಂ ಮಹಿಳೆ ಹಾಗೂ ಪುರುಷನನ್ನು ಹಿಂಬಾಲಿಸಿದ ಗ್ಯಾಂಗ್ ಅಲ್ಲಿಗೆ ದಾಳಿ ಮಾಡಿ, ಮಹಿಳೆಯನ್ನು ಅಪಹರಿಸಿ ಏಳು ಮಂದಿ ಅತ್ಯಾಚಾರ ಎಸಗಿದ್ದಾರೆ. ನಂತರ ಅವರನ್ನು ಬಸ್ಸು ಹತ್ತಿಸಿ ಕಳುಹಿಸಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಏನೂ ಗೊತ್ತಾಗಲಿಲ್ಲ. ನಂತರ ಪೊಲೀಸರು ತನಿಖೆ ನಡೆಸದೆ 500 ರೂಪಾಯಿಗೆ ಕಾಂಪ್ರಮೈಸ್ ಮಾಡಿದ್ದಾರೆ. ಮಾಧ್ಯಮದಲ್ಲಿ ವಿವಾದವಾದಾಗ ಪೊಲೀಸರು ಸಾಮೂಹಿಕ ಅತ್ಯಾಚಾರ ಎಂದು ಪ್ರಕರಣ ದಾಖಲಿಸಿದ್ದಾರೆ. ದೂರು ಹಿಂಪಡೆಯಲು ಹಣದ ಆಮಿಷ ಒಡ್ಡಲಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ನಡೆದಾಗ ಅವರು ನಮ್ಮ ಬದ್ರರ್ಸ್ ಎಂದರು. ಹಾಗಾದರೆ ಈ ಸಿಸ್ಟರ್ ಕಥೆ ಏನು ಎಂದು ಪ್ರಶ್ನಿಸಿದರು.
ಕರಸೇವಕರ ಬಂಧನ: ಕರಸೇವಕರನ್ನು ಬಂಧಿಸಿದ್ದಕ್ಕೆ ಪೊಲೀಸರು ನನ್ನ ಮೇಲೆ ಅವಾಚ್ಯ ಶಬ್ದ ಬಳಕೆ ಎಂದು ಪ್ರಕರಣ ದಾಖಲಿಸಿದ್ದಾರೆ. ಅಯೋಧ್ಯೆಯಲ್ಲಿ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಮಯ ನೋಡಿ ಕರಸೇವಕರಿಗೆ ಆರೋಗ್ಯ ಸರಿ ಇಲ್ಲದಿದ್ದರೂ ಜಾಮೀನು ಸಿಗದಂತೆ ಬಂಧಿಸಲಾಗಿದೆ. 31 ವರ್ಷ ಬಿಟ್ಟ ಪೊಲೀಸರು ಇನ್ನೂ ಒಂದು ವಾರ ಸುಮ್ಮನಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನೆ ಮಾಡಿದರು.
ಕರಸೇವಕ ಶ್ರೀಕಾಂತ್ ಪೂಜಾರಿ ಅಪರಾಧಿ ಎಂದು ನ್ಯಾಯಾಂಗ ತೀರ್ಮಾನಿಸುತ್ತದೆ. ಆತನ ಮೇಲಿನ ಪ್ರಕರಣ ವಜಾಗೊಂಡಿರುವ ದಾಖಲೆ ನನ್ನ ಬಳಿ ಇದೆ. ಪ್ರತಿ ದಿನ ಆಟೋರಿಕ್ಷಾ ಚಲಾಯಿಸುತ್ತಾ ಅಲ್ಲೇ ಇರುವ ವ್ಯಕ್ತಿಯನ್ನು ಬಂಧಿಸುವುದು ಪೊಲೀಸ್ ದೌರ್ಜನ್ಯ ಎಂದರು.
ಮಂಡ್ಯದ ಕೆರೆಗೋಡಿನಲ್ಲಿ ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜ ಹಾರಿಸುತ್ತಾರೆ. ಉಳಿದ ದಿನಗಳಲ್ಲಿ ಹನುಮ ಧ್ವಜ ಹಾರಿಸುತ್ತಾರೆ. ಜನರೇ ಹಣ ಸಂಗ್ರಹಿಸಿ ಕಂಬ ಅಳವಡಿಸುವಾಗ ಸರ್ಕಾರ ಏನೂ ಮಾಡಲಿಲ್ಲ. ನಾನು ಅಲ್ಲಿಗೆ ಭೇಟಿ ನೀಡಿದಾಗ ಪೊಲೀಸರು ರಾಷ್ಟ್ರಧ್ವಜ ಹಾರಿಸಿದ್ದಾರೆ. ನಾನು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ, ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದಾಗ ಕಾಂಗ್ರೆಸ್ ವಿರೋಧಿಸಿತ್ತು. ಹನುಮ, ಶ್ರೀರಾಮನ ಮೇಲಿನ ದ್ವೇಷಕ್ಕೆ ಸರ್ಕಾರ ಗೂಂಡಾಗಿರಿ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದೆಂದು ಬಿಂಬಿಸುವ ಯತ್ನ: ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲದೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಏನು ಹೇಳಿಸಬೇಕೆಂದು ತಿಳಿಯದೆ ಕೇಂದ್ರ ಸರ್ಕಾರದ ಯೋಜನೆಗಳನ್ನೂ ತಮ್ಮದೇ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುತ್ತಿದೆ. ಸಚಿವರು ದಾರಿ ಕಾಣದಂತಾಗಿದ್ದು, ಸರ್ಕಾರ ಕೆಟ್ಟು ದುರಸ್ತಿಯಾಗದೆ ಸ್ಥಗಿತಗೊಂಡಿದೆ. ಹಣವನ್ನು ಸಮಾನವಾಗಿ ಹಂಚಬೇಕೆನ್ನುವುದು ಸರ್ಕಾರದ ಉದ್ದೇಶವಂತೆ. ಆದರೆ ತುಳಿತಕ್ಕೊಳಗಾದ ದಲಿತರಿಗೆ ಮೀಸಲಿಟ್ಟ 11,400 ಕೋಟಿ ರೂಪಾಯಿಯನ್ನು ಬೇರೆ ಕಡೆಗೆ ಬಳಸಿದ್ದಾರೆ. ಹಿಂದುಳಿದವರ ಚಾಂಪಿಯನ್ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಇಂತಹ ಘನ ಕಾರ್ಯಕ್ಕೆ ಆ ಹಣ ಬಳಸಿದ್ದೇವೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಇನ್ನೂ ಐವತ್ತು ಗ್ಯಾರಂಟಿಯಾದರೂ ಮಾಡಿ. ಆದರೆ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಬೇಡಿ. ಮಕ್ಕಳು ಬಸ್ಸಿಲ್ಲದೆ ಜೆಸಿಬಿ, ಕಲ್ಲು ತುಂಬಿಕೊಂಡ ಲಾರಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್ಸುಗಳಿಲ್ಲದೆ, ರೂಟ್‌ಗಳನ್ನು ರದ್ದು ಮಾಡಿ ಜನರಿಗೆ ತೊಂದರೆಯಾಗಿದೆ. ಗುಜರಿಗೆ ಹೋದ ಬಸ್ಸಿಗೆ ಪರ್ಯಾಯವಾಗಿ ಬಸ್ಸು ಖರೀದಿಯಾಗುತ್ತಿದೆಯೇ ಹೊರತು ಹೊಸ ಬಸ್ ಖರೀದಿ ಮಾಡಿಲ್ಲ. ಯಾವುದೇ ಕಾರ್ಯಕ್ರಮ ಮಾಡುವಾಗ ಅದರಿಂದ ಏನು ಪರಿಣಾಮ ಎಂದು ಆಲೋಚಿಸಿಲ್ಲ. ಮಹಿಳೆಯರಿಗೆ 2 ಸಾವಿರ ರೂ. ವನ್ನು ಒಂದು ತಿಂಗಳು ಕೊಟ್ಟು, ಮುಂದಿನ ತಿಂಗಳು ಕೊಡಲೇ ಇಲ್ಲ. ಬಾಕಿ ಎಷ್ಟು ಉಳಿಸಿದೆ ಎಂದು ಸರ್ಕಾರ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
5 ಕೆಜಿ ಅಕ್ಕಿ ನೀಡುತ್ತೇವೆ ಎಂದು ರಾಜ್ಯಪಾಲರ ಭಾಷಣದಲ್ಲಿದೆ. ಅದು ಕೇಂದ್ರ ಸರ್ಕಾರ ನೀಡುತ್ತಿದ್ದು, *ಸೌಜನ್ಯಕ್ಕಾದರೂ* ಉಲ್ಲೇಖಿಸಬೇಕಿತ್ತು. ಕೇಂದ್ರದ ಯೋಜನೆಗಳೆಲ್ಲ ತಮ್ಮದೇ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ವಿದ್ಯುತ್ ಉಚಿತ ಎಂದು ದರ ಹೆಚ್ಚಿಸಲಾಗಿದೆ. ಅಲ್ಲೇ ದುಡ್ಡು ಕಿತ್ತು ಅಲ್ಲೇ ನೀಡುವುದು ಸಿಎಂ ಸಿದ್ದರಾಮಯ್ಯ ಅವರ ಕೆಲಸ. ಯುವನಿಧಿ ಯೋಜನೆಗೆ ಹಣ ಉಳಿಸಲು ವಿಳಂಬ ಮಾಡಿದ್ದಾರೆ. ಬಂದ ತಕ್ಷಣ ಐದು ಗ್ಯಾರಂಟಿ ಚಾಲೂ ಎಂದು ಮತ್ತೆ ಕೊಡಲೇ ಇಲ್ಲ ಎಂದರು.
ಉತ್ತರಪ್ರದೇಶದಲ್ಲಿ 10 ಲಕ್ಷ ಕೋಟಿ ರೂ. ಗುಜರಾತಿನಲ್ಲಿ 26 ಲಕ್ಷ ಕೋಟಿ ರೂ. ಕೈಗಾರಿಕಾ ಒಪ್ಪಂದ ನಡೆದಿದೆ. ಅದನ್ನು ತಿಳಿಸದೆ ಬಂಡವಾಳ ಹೂಡಿಕೆಯಲ್ಲಿ ನಾವೇ ಚಾಂಪಿಯನ್ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ 80-85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಏಳು ತಿಂಗಳಿಂದ *10 ಲಕ್ಷ ಲೀಟರ್ ಇಳಿಕೆಯಾಗಿದೆ.* ಮೇವು ಕೊರತೆ, ಬರಗಾಲ, ಕಾಲುಬಾಯಿ ರೋಗ ಮೊದಲಾದ ಕಾರಣಗಳಿಂದ ಹೀಗಾಗಿದೆ. ರೈತರಿಗೆ ಏಳು ತಿಂಗಳಿಂದ 617 ಕೋಟಿ ರೂ. ಪ್ರೋತ್ಸಾಹಧನ ನೀಡಿಲ್ಲ. 5 ರೂ. ಪ್ರೋತ್ಸಾಹಧನ ಕಡಿತಗೊಂಡಿದೆ. ಪ್ರಣಾಳಿಕೆಯಲ್ಲಿ 2 ರೂ. ಎಂದು ಹೇಳಿ ಅದನ್ನು ಕೂಡ ನೀಡಿಲ್ಲ ಎಂದು ದೂರಿದರು.
ಕೋಚಿಮುಲ್ ನಲ್ಲಿ ಒಂದು ಹುದ್ದೆಗೆ 25-50 ಲಕ್ಷ ರೂ. ಹಣ ಪಡೆಯಲಾಗಿದೆ. ಇಡಿ ದಾಳಿ ಮಾಡಿದಾಗ 50 ಕೋಟಿ ರೂ. ಹಣ ಸಿಕ್ಕಿದೆ. ಮಾತೃಭಾಷೆ ಉಳಿವು ಎಂದು ಹೇಳಿ 200 ಹೋರಾಟಗಾರರನ್ನು ಬಂಧಿಸಿದ್ದಾರೆ. ಕೇಂದ್ರದ ಜಲಜೀವನ್ ಮಿಷನ್ ತಮ್ಮದು ಎಂದು ಹೇಳಿದ್ದಾರೆ ಎಂದರು.
ಬ್ರ್ಯಾಂಡ್ ಬೆಂಗಳೂರು ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಿದ್ದು, ಸುರಂಗ ರಸ್ತೆ ಬಗ್ಗೆ ಹೇಳಿದ್ದಾರೆ. ಮೇಲಿರುವ ರಸ್ತೆಗಳಲ್ಲೇ ಗುಂಡಿಗಳಿರುವಾಗ ಸುರಂಗ ಎಲ್ಲಿ ಮಾಡುತ್ತಾರೆ ಎಂದು ಯೋಚಿಸಬೇಕು. ಸುರಂಗ ಮಾರ್ಗಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ಇದಕ್ಕೂ ಮೊದಲು ರಸ್ತೆ ದುರಸ್ತಿ ಮಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ. ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ 30% ಕಡಿತವಾಗಿದೆ. ಹೊಸ ಬೋರ್ ವೆಲ್ ಕೊರೆದಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ದೂರಿದರು.
ವಿದ್ಯಾರ್ಥಿವೇತನಕ್ಕೆ ಕಲ್ಲು: ಬಿಜೆಪಿ ಸರ್ಕಾರ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯನ್ನು ರೂಪಿಸಿದ್ದು, ಅದನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಭಾಗ್ಯಲಕ್ಷ್ಮಿ, ಕಿಸಾನ್ ಸಮ್ಮಾನ್, ಸ್ವಾಮಿ ವಿವೇಕಾನಂದ ಯುವಶಕ್ತಿ, ಭೂಸಿರಿ, ಶ್ರಮಶಕ್ತಿ, ಬಸ್ ಪಾಸ್ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ಕಾರ್ಮಿಕ ಇಲಾಖೆಯಿಂದ 1-5 ತರಗತಿಯ ಮಕ್ಕಳಿಗೆ 5 ಸಾವಿರ ರೂ. ವಿದ್ಯಾರ್ಥಿವೇತನ ನೀಡುತ್ತಿದ್ದು, ಅದನ್ನು 1,100 ರೂ.ಗೆ ಇಳಿಸಲಾಗಿದೆ. 6-7 ತರಗತಿಯ ಮಕ್ಕಳಿಗೆ 5 ಸಾವಿರ ರೂ. ನೀಡುತ್ತಿದ್ದರೆ 1,250 ರೂ.ಗೆ ಇಳಿಸಲಾಗಿದೆ. 8-9 ತರಗತಿಯ ಮಕ್ಕಳಿಗೆ 12 ಸಾವಿರ ರೂ. ನೀಡುತ್ತಿದ್ದರೆ ಈಗ 3 ಸಾವಿರ ರೂ. ನೀಡಲಾಗುತ್ತಿದೆ. ಎಂಬಿಬಿಎಸ್‌ಗೆ 25 ಸಾವಿರ ರೂ. ನೀಡುತ್ತಿದ್ದರೆ ಈಗ 11 ಸಾವಿರ ರೂ.ಗೆ ಇಳಿಸಲಾಗಿದೆ. ಎಂಟೆಕ್‌ಗೆ 60 ಸಾವಿರ ರೂ. ನೀಡುತ್ತಿದ್ದರೆ ಅದನ್ನು 11 ಸಾವಿರ ರೂ.ಗೆ ತಂದಿದ್ದಾರೆ ಎಂದು ದೂರಿದರು.
ಕೇಂದ್ರದಿಂದ ಅನ್ಯಾಯವಾಗಿಲ್ಲ: ಕೇಂದ್ರ ಸರ್ಕಾರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ರ ಅಭಿವೃದ್ಧಿಗೆ 5,000 ಕೋಟಿ ರೂ. ದೊರೆತಿದೆ. 2009-14 ರ ಅವಧಿಯಲ್ಲಿ ರೈಲ್ವೆ ಯೋಜನೆಗೆ 835 ಕೋಟಿ ರೂ. ಸಿಕ್ಕರೆ, ಮೋದಿ ಅವಧಿಯಲ್ಲಿ 3,424 ಕೋಟಿ ರೂ. ದೊರೆತಿದೆ. ಕರಾವಳಿ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ 1,441 ಕೋಟಿ ರೂ. ದೊರೆತಿದೆ. ಆದ್ದರಿಂದ ಕಾಂಗ್ರೆಸ್ ಹೇಳುವಂತೆ ಕೇಂದ್ರ ಸರ್ಕಾರದಿಂದ ಅನ್ಯಾಯ ಎನ್ನುವುದು ತಪ್ಪು. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ 3-4 ಪಟ್ಟು ಅಧಿಕ ಅನುದಾನ ದೊರೆತಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….