ಇದು ರಾಮಾಯಣದ ಕಾಲದಲ್ಲಿ ನಡೆದ ಒಂದು ಕಥೆ ಅಂತ ಕೇಳಿದ್ದೆ. ಅಯೋಧ್ಯ ನಗರದ ಒಂದು ಮನೆಯಲ್ಲಿ ಒಬ್ಬ ಮುಗ್ಧ ಹುಡುಗ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ಅವನು ತುಂಬಾ ಸೋಮಾರಿ. ಏನೂ ಕೆಲಸ ಮಾಡುತ್ತಿರಲಿಲ್ಲ,. ಆದರೆ ಅವನು ತಿಂಡಿಪೋತ, ಹಸಿವು ತಡೆಯಲು ಅವನಿಂದ ಸಾಧ್ಯವೇ ಇಲ್ಲ. ಕೆಲಸ ಮಾಡುತ್ತಿರಲಿಲ್ಲ. ತಿನ್ನುವುದು, ಮಲಗಿ ನಿದ್ರೆ ಮಾಡುವುದು ಮಾತ್ರ ಮಾಡುತ್ತಿದ್ದ.
ಮನೆಯವರಿಗೆಲ್ಲ ಈ ಹುಡುಗ ಸೋಮಾರಿ, ಕೆಲಸ ಮಾಡುವುದಿಲ್ಲ ಬರೀ ತಿನ್ನುವುದು ಮಲಗುವುದು ಇಷ್ಟೇ ಎಂದು ತಿಳಿದು, ಅವನಿಗೆ ‘ನೋಡಪ್ಪ ನಮ್ಮ ಮನೆಯಲ್ಲಿ ಇನ್ನು ಮೇಲೆ ನಿನ್ನನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ. ಯಾವುದಾದರೂ ಆಶ್ರಮ ನೋಡಿಕೋ’ ಎಂದು ಹೇಳಿದರು. ಹುಡುಗನು ಆಯಿತು ಎಂದನು. ಪಾಪ ನನ್ನಿಂದ ಇವರಿಗೆ ಏಕೆ ತೊಂದರೆ ನಾನು ಬೇರೆ ಕಡೆ ಗುರುಗಳ ಆಶ್ರಮವನ್ನು ನೋಡಿಕೊಂಡರಾಯಿತು ಎಂದು ಮನೆಯನ್ನು ಬಿಟ್ಟು ಹೊರಟನು.
ಯಾವ ಆಶ್ರಮ ಚೆನ್ನಾಗಿದೆ ಎಂದು ಹುಡುಕುತ್ತಾ ಇರುವಾಗ ಒಂದು ಆಶ್ರಮದ ಹೊರಗೆ ನಿಂತಿದ್ದ ಗುರುಗಳನ್ನು ನೋಡಿದ. ಅವರು ಬೆಳ್ಳಗೆ ಗುಂಡುಗುಂಡಗೆ ಚೆನ್ನಾಗಿದ್ದರು. ಅವನಿಗನ್ನಿಸಿತು ಈ ಆಶ್ರಮದಲ್ಲಿ ಬೇಕಾದಷ್ಟು ತಿನ್ನಲು ಇರುತ್ತದೆ ಎಂದುಕೊಂಡು ಆಶ್ರಮದ ಒಳಗೆ ಹೇಗಿದೆ ಎಂದು ನೋಡಲು ಬಂದನು. ಆಶ್ರಮದ ಒಳಗೆ ಕೆಲ ಶಿಷ್ಯರಿದ್ದರು. ಅವರೆಲ್ಲರೂ ಗುಂಡುಗುಂಡಗೆ ಕಳೆಕಳೆಯಾಗಿ ಚೆನ್ನಾಗಿದ್ದರು. ಹೋ ಈ ಆಶ್ರಮ ನನಗೆ ಸರಿಯಾದದ್ದು ಇಲ್ಲೆ ಇದ್ದರೆ ಬೇಕಾದಷ್ಟು ತಿನ್ನಲು ಸಿಗುತ್ತದೆ ಎಂದುಕೊಂಡು ಅಲ್ಲಿದ್ದ ಗುರುಗಳಿಗೆ ನಮಸ್ಕರಿಸಿ, ಗುರುಗಳೇ, ನಿಮ್ಮ ಆಶ್ರಮದಲ್ಲಿರಲು ನಾನು ಬರುತ್ತೇನೆ ಆಗಬಹುದೇ ಎಂದನು.
ಗುರುಗಳು ಹುಡುಗನನ್ನು ನೋಡಿ ಆಯಿತು ಸೇರಿಕೊ ಎಂದರು. ಪುನಹ ಹುಡುಗ, ಗುರುಗಳೇ ಇಲ್ಲಿ ತಿನ್ನಲು ಬೇಕಾದಷ್ಟು ಸಿಗುತ್ತದೆ ಅಲ್ಲವೇ ಎಂದನು. ಹೊ ಹೋ ನೀನು ಎಷ್ಟು ಬೇಕಾದರೂ ತಿನ್ನಬಹುದು ಸಿಗುತ್ತದೆ ಎಂದರು. ಅವನಿಗೆ ಖುಷಿಯಾಯಿತು ಗುರುಗಳ ಆಶ್ರಮಕ್ಕೆ ಬಂದು ಸೇರಿಕೊಂಡ.
ಇವನು ಬಂದ ಎರಡು ದಿನದಲ್ಲೆ ಆ ತಿಂಗಳ ಏಕಾದಶಿ ಬಂದಿತು. ಏನೂ ತಿಳಿಯದ ಮುಗ್ಧ ಬಾಲಕ ದಿನದಂತೆ ನೋಡುತ್ತಾನೆ. ಆಶ್ರಮದಲ್ಲಿ ಯಾರು ಕಾಣುತ್ತಿಲ್ಲ. ಮತ್ತು ಯಾರೂ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ ಎಲ್ಲರೂ ಎಲ್ಲಿ ಹೋದರುಷಎಂದುಕೊಂಡು ಎಲ್ಲಾ ಕಡೆ ನೋಡಿ ಕೊನೆಗೆ ಒಂದು ಕಡೆ ಬಂದ.
ಅಲ್ಲಿ ಎಲ್ಲ ಶಿಷ್ಯರು ಸ್ನಾನಾದಿಗಳನ್ನು ಮುಗಿಸಿಕೊಂಡು ಸಂಧ್ಯಾವಂದನೆ ಜಪ-ತಪ ಗಳನ್ನು ಮಾಡುತ್ತಾ ಕುಳಿತಿದ್ದರು. ಅಲ್ಲಿದ್ದ ಶಿಷ್ಯರನ್ನು ಕೇಳಿದ. ಇಷ್ಟು ಹೊತ್ತಾದರೂ ಏನು ತಿನ್ನಲಿಕ್ಕೆ ಇಲ್ಲವೇ? ನನಗೆ ಹಸಿವಾಗುತ್ತಿದೆ ಎಂದನು. ಆಗ ಶಿಷ್ಯ ರಲ್ಲಿ ಒಬ್ಬ ಈ ದಿನ ಏಕಾದಶಿ ಏನು ಮಾಡುವುದಿಲ್ಲ ಎಂದನು. ಹಾಗಾದರೆ ಇಡೀ ದಿನ ಉಪವಾಸವಿರಬೇಕೇ ಎಂದು ಕೇಳಿದನು. ಹೌದು ಈ ದಿನ ಒಲೆಯನ್ನೇ ಹಚ್ಚುವುದಿಲ್ಲ . ಇದನ್ನು ಕೇಳಿದ ಹುಡುಗ ನನ್ನ ಕೈಯಲ್ಲಿ ಸಾಧ್ಯವಿಲ್ಲ. ನಾನು ಉಪವಾಸ ಇರಲಾರೆ ಎಂದನು. ಹಾಗಾದರೆ ಗುರುಗಳನ್ನು ಕೇಳು ಎಂದರು. ಆ ಹುಡುಗ ಗುರುಗಳ ಹತ್ತಿರ ಬಂದು
ಗುರುಗಳೇ ಈ ದಿನ ಏಕಾದಶಿ ಅಂತ, ಏನೂ ಮಾಡುವುದಿಲ್ಲವಂತೆ. ಆದರೆ ನನಗೆ ಹಸಿವು ತಡೆಯಲಾಗುವುದಿಲ್ಲ ಏನಾದರೂ ಬೇಕು ಎಂದನು.
ಮುಗುಳ್ನಗುತ್ತಾ ಗುರುಗಳು, ಹೌದು ಮಗು ಈ ದಿನ ಏಕಾದಶಿ. ಉಪವಾಸ ಮಾಡಿದರೆ ಭಗವಂತನ ಕೃಪೆಗೆ ಪಾತ್ರರಾಗಬಹುದು. ಈ ಒಂದು ದಿನ ಉಪವಾಸ ಇರು ನಾಳೆ ನೀನು ಬೇಕಾದ್ದು ತಿನ್ನುವಂತೆ ಎಂದರು. ನನಗೆ
ಆಗುವುದಿಲ್ಲ ಗುರುಗಳೇ ಎಂದನು. ಆಗ ಗುರುಗಳು, ನೋಡು ಮಗು ಆಶ್ರಮದಲ್ಲಿ ಈ ದಿನ ಏನು ಮಾಡುವುದಿಲ್ಲ ನಿನಗೆ ತಿನ್ನಬೇಕು ಎಂದಾದರೆ ಆಶ್ರಮದ ಮೇಲೆ ಒಂದು ಬೆಟ್ಟ ಇದೆ. ನೀನು ಇಲ್ಲಿಂದ ಅಡುಗೆ ಮಾಡಲು ಏನು ಬೇಕು ಆ ಸಾಮಾನುಗಳನ್ನು ತೆಗೆದುಕೊಂದು ಹೋಗಿ ಅಲ್ಲಿ ಮಾಡಿಕೊಂಡು ತಿನ್ನಬಹುದು ಎಂದರು. ಆಗಬಹುದು ಗುರುಗಳೇ ಎನ್ನುತ್ತಾ ಸದ್ಯ ಇಷ್ಟಾದರೂ ಇದೆಯಲ್ಲ ಅಂದುಕೊಂಡು ಎಲ್ಲಾ ಜೋಡಿಸಿಕೊಂಡು ಬೆಟ್ಟದ ಕಡೆ ಹೊರಟನು. ಹುಡುಗನನ್ನು ತಡೆದ ಗುರುಗಳು ನೋಡು ಮಗು ನೀನು ಏನು ಬೇಕಾದರೂ ಮಾಡಿಕೊಂಡು ತಿನ್ನು ಆದರೆ ಅಡಿಗೆಮಾಡಿ ಮುಗಿದ ಮೇಲೆ ಸಮರ್ಪಿಸಿ ತಿನ್ನಬೇಕು ಎಂದರು.
ಈ ಹುಡುಗ ಎಲ್ಲಾ ತೆಗೆದುಕೊಂಡು ಹೋಗಿ ಬೆಟ್ಟದಲ್ಲಿ ಅಡುಗೆ ಮಾಡಿದ. ಇನ್ನೂ ಹುಡುಗ ಅದಕ್ಕೆ ಏನು ಬರುತ್ತೋ ಅದನ್ನೇ ಮಾಡಿಕೊಂಡಿದ್ದ. ನಂತರ ಮಾಡಿದ ಪದಾರ್ಥವನ್ನು ರಾಮನಿಗೆ ಸಮರ್ಪಿಸಿದರಾಯಿತು ಎಂದುಕೊಂಡು ರಾಮ ನಾನು ಅಡಿಗೆ ಮಾಡಿದ್ದೇನೆ ಊಟಕ್ಕೆ ಬಾ ಎಂದು ಪ್ರಾರ್ಥಿಸಿದ.
ಇದನ್ನು ಕೇಳಿದ ರಾಮನು ನಕ್ಕು, ಸೀತೆಯ ಹತ್ತಿರ ಬಂದು ನೋಡು ಸೀತೆ ಬಾಲಕ ಊಟಕ್ಕೆ ಕರೆದಿದ್ದಾನೆ ಹೋಗಿ ಊಟ ಮಾಡಿ ಬರೋಣಾ ಬಾ ಎನ್ನಲು, ಸೀತಾ-ರಾಮ ಇಬ್ಬರು ಊಟಕ್ಕೆ ಬಂದರು. ಹುಡುಗ ಸೀತಾಮಾತೆ ಯನ್ನು ನೋಡೇ ನೋಡಿದ, ನಾನು ಕರೆದಿದ್ದು ರಾಮನನ್ನು ಮಾತ್ರ ಈಗ ಜೊತೆಯಲ್ಲಿ ಸೀತಮ್ಮನು ಬಂದಿದ್ದಾಳೆ.
ನಾನು ಮಾಡಿರುವ ಅಡುಗೆ ಇಬ್ಬರಿಗೆ ಮಾತ್ರ ನನಗೆ ಊಟ ಸಿಕ್ಕಹಾಗೆ ಎಂದು ಮನದಲ್ಲಿ ಅಂದು ಕೊಂಡನು. ರಾಮನು ಹುಡುಗನನ್ನು ನೋಡಿ ಯಾಕೆ ನಾನು ಬರಬಾರದಿತ್ತೆ ಎಂದು ಕೇಳಿದ. ಆ ಹುಡುಗ ಹಾಗೇನಿಲ್ಲ ಎಂದು ಹೇಳಿ ಸೀತೆಯನ್ನು ನೋಡುತ್ತಾ ಅಡುಗೆಯನ್ನು ನೋಡುವುದು ಮಾಡಿದ. ಆದರೂ ರಾಮ-ಸೀತೆಯರನ್ನು ಕೂರಿಸಿ ಬಡಿಸಿದ. ರಾಮ ಸೀತೆ ಹೊಟ್ಟೆ ತುಂಬಾ ಊಟ ಮಾಡಿ ಹೊರಟರು. ಅಂದು ಅವನಿಗೆ ಏಕಾದಶಿಯೇ ಆಯಿತು.
ಹೀಗೆ ಮತ್ತೊಂದು ಏಕಾದಶಿ ಬಂದಿತು. ಈ ಸಾರಿ ಹುಡುಗ ಒಂದು ಉಪಾಯ ಮಾಡಿದ. ಮೂರು ಜನಕ್ಕಾಗುವಷ್ಟು ಅಡಿಗೆ ಮಾಡಿದ ಊಟದ ಹೊತ್ತಿಗೆ ರಾಮ ನೀನು ಬಾ ಜೊತೆಯಲ್ಲಿ ಸೀತಮ್ಮನು ಬರಲಿ ಎಂದು ಪ್ರಾರ್ಥಿಸಿದ. ಊಟದ ಸಮಯಕ್ಕೆ ಸರಿಯಾಗಿ ರಾಮ-ಸೀತೆ ಜೊತೆಗೆ ಲಕ್ಷ್ಮಣನು ಬಂದ.
ಮತ್ತೆ ಹುಡುಗ ನಾನು ಕರೆದಿದ್ದು ರಾಮ ಸೀತೆ ಇಬ್ಬರನ್ನು ಮಾತ್ರ ಈಗ ಲಕ್ಷ್ಮಣನ ಸಮೇತ ಮೂರು ಜನ ಬಂದಿದ್ದಾರೆ. ಆಯ್ತು ಇವತ್ತು ನನಗೆ ಏಕಾದಶಿ ಗತಿ ಎಂದು ಮನದಲ್ಲಿ ಅಂದುಕೊಂಡ. ರಾಮ -ಸೀತೆ- ಲಕ್ಷ್ಮಣ ಮೂರು ಜನರನ್ನು ಕೂರಿಸಿ ಬಡಿಸಿದ ಸ್ವಲ್ಪವೂ ಉಳಿಯದಂತೆ ಮೂರು ಜನ ಹೊಟ್ಟೆ ತುಂಬಾ ಊಟ ಮಾಡಿ ಹೊರಟರು. ಈ ಬಾಲಕನಿಗೆ ಮತ್ತೆ ಏಕಾದಶಿಯೇ ಗತಿಯಾಯಿತು.
ಹೀಗೆ ಮತ್ತೊಂದು ಏಕಾದಶಿ ಬಂದಿತು. ಈ ಸಾರಿ ಹುಡುಗನು ಗುರುಗಳ ಹತ್ತಿರ ಗುರುಗಳೇ ನನಗೆ ಜಾಸ್ತಿ ಸಾಮಾಗ್ರಿಗಳು ಬೇಕು ಎಂದನು. ಆಯ್ತು ಅಗತ್ಯವಿರುವಷ್ಟು ತೆಗೆದುಕೊಂಡು ಹೋಗು ಎಂದರು. ಹುಡುಗ ನಾಲ್ಕು ಜನಕ್ಕೆ ಆಗುವಷ್ಟು ಸಾಮಾಗ್ರಿಗಳನ್ನು ತಂದು ಅಡಿಗೆ ಮಾಡಿ, ಪ್ರಾರ್ಥಿಸಿದ ರಾಮಾ ನೀನು ಬಾ, ಸೀತಮ್ಮ ನೀನು ಬಾ, ಜೊತೆಗೆ ಲಕ್ಷ್ಮಣನು ಬರಲಿ ಎಂದನು. ಊಟದ ಹೊತ್ತಿಗೆ ರಾಮ ಸೀತೆ ಲಕ್ಷ್ಮಣರ ಜೊತೆ ಹನುಮಂತನು ಬಂದನು.
ಈ ಹುಡುಗ ಹನುಮಂತನನ್ನು ಮೇಲಿನಿಂದ ಕೆಳತನಕಾ ಮತ್ತೆ ನೋಡಿದ. ನಾನು ಕರೆದಿದ್ದು ರಾಮ ಸೀತೆ ಲಕ್ಷ್ಮಣಗೆ, ರಾಮ ಹನುಮಂತನನ್ನು ಕರೆದುಕೊಂಡು ಬಂದಿದ್ದಾನೆ. ಇವತ್ತು ನನಗೆ ಆಹಾರ ಸಿಕ್ಕ ಹಾಗೆ ಎಂದು ಮನಸ್ಸಿನಲ್ಲಿ ಅಂದುಕೊಂಡನು. ಹುಡುಗನನ್ನು ನೋಡಿದ ರಾಮ ಯಾಕಪ್ಪಾ ನಾವುಗಳು ಬರಬಾರದಿತ್ತೆ ಎಂದು ಕೇಳಿದ. ಇಲ್ಲ ಇಲ್ಲ ಹಾಗೇನು ಇಲ್ಲ ಎಂದು ಅವನು ಮಾಡಿದ ಅಡುಗೆಯನ್ನು ರಾಮ, ಸೀತೆ, ಲಕ್ಷ್ಮಣ, ಹನುಮಂತನಿಗೆ ಕೂರಿಸಿ ಬಡಿಸಿದ. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಹೊರಟರು ಇವನಿಗೆ ಮತ್ತೆ ಏಕಾದಶಿ ಆಯಿತು.
ಈ ಸಾರಿ ಮತ್ತೆ ಏಕಾದಶಿ ಬಂದಿತು. ಗುರುಗಳಿಗೆ ಹೇಳಿದ. ಗುರುಗಳೇ ನನಗೆ ಅಷ್ಟು ಸ್ವಲ್ಪ ಸಾಮಾನುಗಳು ಸಾಕಾಗುವುದಿಲ್ಲ ತುಂಬಾ ಬೇಕು ಎಂದನು. ಗುರುಗಳಿಗೆ ಆಶ್ಚರ್ಯವಾಯಿತು. ಹುಡುಗ ಎಷ್ಟು ತಿನ್ನುತ್ತಾನೆ. ಏನೇ ಮಾಡಿಕೊಂಡರು ನಾಲ್ಕೈದು ಸಲ ತಿಂದಾನು ಅಷ್ಟಕ್ಕಾದರೂ ಒಬ್ಬನಿಗೆ ಎಷ್ಟು ಬೇಕು ಎಂದುಕೊಂಡು ಹುಡುಗ ಕೇಳಿದ್ದಕ್ಕಿಂತ ಜಾಸ್ತಿ ಸಾಮಾನುಗಳನ್ನು ಕೊಟ್ಟರು. ಉಳಿದ ಶಿಷ್ಯರಿಗೆ, ಹುಡುಗ ಏನು ಮಾಡುತ್ತಾನೆ ಎಂದು ಮರೆಯಲ್ಲಿ ನಿಂತು ನೋಡಿಕೊಂಡು ಬರಲು ಹೇಳಿದರು.
ಹುಡುಗ ಸಾಮಾನುಗಳನ್ನೆಲ್ಲ ತಂದು ಒಂದುಕಡೆ ಜೋಡಿಸಿಟ್ಟು, ತಾನು ಸುಮ್ಮನೆ ಕುಳಿತುಕೊಂಡ. ಊಟದ ಸಮಯ ಬಂದಿತು. ರಾಮ ನೀನು ಬಾ, ಸೀತಮ್ಮ ನೀನು ಬಾ, ಲಕ್ಷ್ಮಣ ,ಹನುಮಂತ, ಭರತ ,ಶತ್ರುಘ್ನ ನೂ ಬನ್ನಿ ಎಂದು ಪ್ರಾರ್ಥಿಸಿದ. ಮತ್ತೆ ತಾನು ಸುಮ್ಮನೆ ಕುಳಿತ. ಊಟದ ಸಮಯಕ್ಕೆ ಈ ಸಲ ಲಕ್ಷ್ಮಣ, ಹನುಮಂತ, ಭರತ, ಶತ್ರುಘ್ನ, ಕೌಸಲ್ಯೆ, ಕೈಕೆ, ಸುಮಿತ್ರಾ, ಹೀಗೆ ಎಲ್ಲ ಸಕುಟುಂಬ ಪರಿವಾರ ಸಮೇತ ರಾಮ-ಸೀತೆಯರು ಬಂದರು.
ರಾಮ ಬಂದು ನೋಡುತ್ತಾನೆ ಎಲ್ಲೂ ಮಾಡಿದ ಅಡುಗೆ ತಿಂಡಿ ಏನು ಕಾಣಲಿಲ್ಲ ಹುಡುಗನಿಗೆ ಯಾಕಪ್ಪ ಈ ದಿನ ಅಡಿಗೆ ಮಾಡಿಲ್ಲವೇ? ನನ್ನನ್ನು ಊಟಕ್ಕೆ ಯಾಕೆ ಕರೆದೆ ಎಂದು ಕೇಳಿದಾಗ, ಆ ಹುಡುಗ, ನೋಡು ರಾಮ ನಿಮಗೆಲ್ಲಾ ಏನೇನು ಬೇಕೋ ಅದನ್ನೆಲ್ಲಾ ಮಾಡಿಕೊಂಡು ಊಟ ಮಾಡಿ ಅಲ್ಲೇ ಸಾಮಾನುಗಳನ್ನೆಲ್ಲ ಜೋಡಿಸಿಟ್ಟಿದ್ದೇನೆ ಎಂದನು. ರಾಮನು ನಕ್ಕು, ತನ್ನ ಪರಿವಾರದವರಿಗೆ ಅಡುಗೆ ಮಾಡಲು ಹೇಳಿದನು. ಸೀತೆ ತರಕಾರಿ ಹೆಚ್ಚಿದರೆ
ಹನುಮಂತ ನೀರು ತರಲು ಹೋದ, ಲಕ್ಷ್ಮಣ ಒಲೆ ಹಚ್ಚಲು ಕುಳಿತ, ಹೀಗೆ ಒಬ್ಬೊಬ್ಬರು ಒಂದೊಂದು ಕೆಲಸ ಮಾಡುತ್ತಿದ್ದರು. ಜೋಡಿಸಿಟ್ಟ ಸಾಮಾನು ಹೊರತಾಗಿ ಇದಾವುದು ಶಿಷ್ಯರಿಗೆ ಕಾಣಲಿಲ್ಲ. ಇದನ್ನು ಹೋಗಿ ಗುರುಗಳಿಗೆ ಹೇಳಿದವು. ಈಗ ಗುರುಗಳೇ ಬೆಟ್ಟಹತ್ತಿ ಬಂದರು. ಬಂದು ನೋಡುತ್ತಾರೆ ಜೋಡಿಸಿಟ್ಟ ಸಾಮಾನುಗಳೆಲ್ಲ ಹಾಗೆ ಇದೆ. ಆ ಹುಡುಗ ಒಂದು ಕಡೆ ಕುಳಿತುಕೊಂಡಿತ್ತು.
ಅವನನ್ನು ನೋಡಿ ಗುರುಗಳು ಯಾಕೋ ಅಷ್ಟೆಲ್ಲಾ ಸಾಮಾನು ಬೇಕು ಅಂತ ತಂದಿದಿಯಾ ಏನು ಮಾಡಿಲ್ಲವೇ ಎಂದು ಕೇಳಿದರು. ಹುಡುಗನು ಕೋಪದಿಂದ ನೋಡಿ ಗುರುಗಳೇ ನಾನೇನು ಮಾಡಿ ಕೊಳ್ಳಲಿ ಎಲ್ಲಾ ಅವರೇ ಮಾಡಿಕೊಂಡು ಊಟ ಮಾಡುತ್ತಿದ್ದಾರೆ ಎಂದನು. ಗುರುಗಳು ನೋಡಿದರೆ ಮತ್ತೆ ಏನು ಕಾಣಲಿಲ್ಲ ಬರೀ ಸಾಮಾಗ್ರಿಗಳು ಮಾತ್ರ ಇತ್ತು. ಎಲ್ಲಪ್ಪ ಯಾರು ಕಾಣುತ್ತಿಲ್ಲವಲ್ಲ ಎಂದರು. ಹುಡುಗನಿಗೆ ಇನ್ನೂ ಸಿಟ್ಟು ಬಂತು.
ರಾಮ ನಿನಗೆ ಗೊತ್ತಾಗಲ್ಲವಾ ನಮ್ಮ ಗುರುಗಳು ಬಂದಿದ್ದಾರೆ. ಅವರಿಗೆ ಹೇಳು. ನಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೇವೆ ಅಂತ. ನೀನು ಹಾಗೆ ಅಡಗಿಕೊಂಡು ಕುಳಿತರೆ ಎಲ್ಲವನ್ನೂ ನಾನೇ ತಿಂದಿದ್ದೇನೆ ಅಂತ ಗುರುಗಳು ತಿಳಿದುಕೊಳ್ಳುತ್ತಾರೆ ಎಂದನು. ರಾಮನು ನಕ್ಕು ಗುರುಗಳಿಗೆ ತನ್ನ ಪರಿವಾರ ಸಮೇತ ದರ್ಶನ ಕೊಟ್ಟು ಮಾಯವಾದನು.
ಗುರುಗಳು ದಿಗ್ಭ್ರಾಂತರಾದರು. ತುಂಬಿದ ಕಣ್ಣುಗಳಿಂದ ಓಡಿಬಂದು ಭಾವುಕರಾಗಿ ಆ ಹುಡುಗನನ್ನು ತಬ್ಬಿಕೊಂಡರು. ನಿನ್ನ ಮುಗ್ಧ ಮನಸ್ಸಿಗೆ ಏನು ಹೇಳಲಿ ಮಗು, ನಿನಗಿಂತ ಭಾಗ್ಯಶಾಲಿಗಳು ಯಾರು ಇಲ್ಲ. ಯಾವ ಉಪವಾಸ, ವ್ರತ -ಕಥೆ ಪೂಜೆ-ಪುನಸ್ಕಾರ, ಎಲ್ಲಕ್ಕಿಂತ ಭಗವಂತನಿಗೆ ನಿನ್ನಂತಹ ಮುಗ್ದ ಮನಸ್ಸಿನ ಭಕ್ತರ ನಂಬಿಕೆ, ಪ್ರೀತಿ, ಎಲ್ಲಕ್ಕಿಂತ ಹೆಚ್ಚು ಎಂಬುದನ್ನು ಸಾಬೀತುಪಡಿಸಿದೆ. ನಿನಗೆ ಯಾವ ಗುರುಗಳ ಅವಶ್ಯಕತೆಯೂ ಇಲ್ಲ ಎಂದು ಮನತುಂಬಿ ಹರಸಿದರು.
ಬರಹ: ಆಶಾ ನಾಗಭೂಷಣ. (ಸಂಗ್ರಹ ವರದಿ; ಗಣೇಶ್. ಎಸ್.ದೊಡ್ಡಬಳ್ಳಾಪುರ) ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….