ಬೆಂಗಳೂರು, (ಡಿ.27); ಕರೋನ ಸಂಕಷ್ಟ ಕಾಲದಲ್ಲಿ ಎಲ್ಲರೂ ಜೀವ ಉಳಿಸಲು ಹೋರಾಟ ನಡೆಸಿದರೆ, ಬಿಜೆಪಿಯವರು ರಾಜ್ಯದ ಜನರ ದುಡ್ಡನ್ನು ಲೂಟಿ ಮಾಡುವ ಮೂಲಕ ಕರೋನಾ ಸೋಂಕಿಗಿಂತ ದೊಡ್ಡ ವೈರಸ್‌ಗಳಂತೆ ವರ್ತಿಸಿದ್ದಾರೆಂದು ದೊಡ್ಡಬಳ್ಳಾಪುರ ನಿಕಟಪೂರ್ವ ಶಾಸಕ ಟಿ.ವೆಂಕಟರಮಣಯ್ಯ ಅಭಿಪ್ರಾಯ ಪಟ್ಟರು.
ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದ ಅವಧಿಯ ವೇಳೆ ಕೋವಿಡ್ ಕಾರಣ ಚಿಕಿತ್ಸೆ ನೆಪದಲ್ಲಿ 40 ಸಾವಿರ ಕೋಟಿ ರೂ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಾವಿನ ಮನೆಯಲ್ಲಿ ಭ್ರಷ್ಟಾಚಾರದ ಸಂಭ್ರಮಾಚರಣೆ ಮಾಡಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಹಗರಣಗಳು ಬಿಜೆಪಿಗರಿಂದಲೇ ಬಯಲಾಗುತ್ತಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷೀಯರ ವಿರುದ್ಧ ಅಷ್ಟೇಲ್ಲ ಮಾತನಾಡಿದರು ಯಾವುದೇ ಕ್ರಮವಿಲ್ಲವೆಂದರೆ. ಇವರ ಅಕ್ರಮದ ಸಂಪೂರ್ಣ ವ್ಯವಹಾರ ಮಾಹಿತಿ ಯತ್ನಾಳ್ಗೆ ಗೊತ್ತಿರುವಂತಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ.
ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಹಣವನ್ನು ಲೂಟಿ ಮಾಡಿದ್ದು, ಬಟಾಬಯಲಾಗಿತ್ತು.. ಅದನ್ನು ಯತ್ನಾಳ್ ಒಪ್ಪಿಕೊಂಡಿದ್ದಾರೆ ಅಷ್ಟೇ. ಯತ್ನಾಳ್ ಬಾಯಿಬಿಟ್ಟ ಕಾರಣ ಕಾಂಗ್ರೆಸ್ ಮಾಡಿದ ಆರೋಪ ನೂರಕ್ಕೆ ನೂರರಷ್ಟು ಸತ್ಯ ಎಂಬುದು ಜನರಿಗೆ ಈಗ ಮನವರಿಕೆಯಾಗುತ್ತಿದೆ.
ಕೇಂದ್ರ ಮತ್ತು ರಾಜ್ಯದಲ್ಲಿದ್ದ ಡಬಲ್ ಇಂಜಿನ್ ಸರ್ಕಾರಗಳು ಕರ್ನಾಟಕದ ಜನತೆಯ ತೆರಿಗೆ ಹಣವನ್ನು ಲೂಟಿ ಮಾಡಿರುವುದು, ಸ್ವಪಕ್ಷೀಯರಿಂದಲೇ ಬಯಲಿಗೆ ಬರುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ತನಿಖೆಯಲ್ಲಿ ಬಿಜೆಪಿಯ ಭ್ರಷ್ಟರಿಗೆ ಶಿಕ್ಷೆಯಾಗಲಿದೆ ಎಂದು ವೆಂಕಟರಮಣಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….